ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಏಕತಾ ದಿನ’ ಕಾರ್ಯಕ್ರಮ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆಯಾಯ ಪ್ರಾಂತ್ಯದವರು ಅದೇ ಊಟ ಮಾಡಿ. ಆದರೆ, ಇತಿಮಿತಿ ಇರಲಿ.
ಕ್ರೀಡಾಪಟುಗಳು ಸೇರಿದಂತೆ ಯಾರೂ 120 ವರ್ಷಕ್ಕಿಂತ ಹೆಚ್ಚು ಬದುಕಲು ಸಾಧ್ಯವೇ ಇಲ್ಲ
ಮೈಸೂರು: ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಒತ್ತಡವೇ ಮುಖ್ಯ ಕಾರಣ. ಆರ್ಥಿಕ, ಕೌಟುಂಬಿಕ, ವೃತ್ತಿ...ಹೀಗೆ ವಿವಿಧ ಒತ್ತಡಗಳಿಂದ ಬಳಲುವಿಕೆ ಹೆಚ್ಚಾಗಿದೆ. ಇದರಿಂದ ಹೊರಬರಲು ಪ್ರಯತ್ನಿಸಿ, ಸಹಜ ಜೀವನ ನಡೆಸಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಹೇಳಿದರು.
ರಾಷ್ಟ್ರೀಯ ಏಕತಾ ಸಪ್ತಾಹದ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಏಕತಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯಕ್ಕಾಗಿ ಯಾವ ಆಹಾರ ಸೇವನೆ ಮಾಡಬೇಕೆಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಾಡುತ್ತದೆ. ಚಿಕ್ಕ ವಯಸ್ಸಿನಿಂದ ಯಾವ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೀರೋ ಅದನ್ನು ಮುಂದುವರಿಸಿದರೆ ಸಾಕು. ಆಯಾಯ ಪ್ರಾಂತ್ಯದವರು ಅದೇ ಊಟ ಮಾಡಿ. ಆದರೆ, ಇತಿಮಿತಿ ಇರಲಿ. ಈಗಾಗಲೇ ಬಳಸುತ್ತಿರುವ ಅಡುಗೆ ಎಣ್ಣೆಯನ್ನೇ ಮುಂದುವರಿಸಿ. ಅದರಲ್ಲೂ ಇತಿಮಿತಿ ಇರಲಿಯಷ್ಟೇ ಎಂದರು.
ಆಯಾಯ ಪ್ರಾಂತ್ಯದ ಆಹಾರ ಪದ್ಧತಿಗೆ ಅಲ್ಲಿಯ ಸ್ಥಳೀಯ ಜನರ ಅನುವಂಶಿಕ(ಜೀನ್) ಹೊಂದಿಕೊಂಡಿರುತ್ತದೆ. ಇದು ಬಲಿಷ್ಠವಾದಷ್ಟು ಆರೋಗ್ಯ ಉತ್ತಮವಾಗಿರುತ್ತದೆ.
ಆದರೆ, ಯಾರೂ ನೂರರಷ್ಟು ರೋಗಮುಕ್ತರಲ್ಲ. ಕ್ರಿಕೆಟಿಗರಾದ ಸೌರವ ಗಂಗೂಲಿ, ಕಪಿಲ್‌ದೇವ್ ಅವರ ಹೃದಯಕ್ಕೆ ತಲಾ 2 ಸ್ಟಂಟ್ ಅಳವಡಿಸಲಾಗಿದೆ. ಕ್ರೀಡಾಪಟುಗಳು ಸೇರಿದಂತೆ ಯಾರೂ 120 ವರ್ಷಕ್ಕಿಂತ ಹೆಚ್ಚು ಬದುಕಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಜಗತ್ತಿನಲ್ಲಿ ಯಾವ ಆಹಾರವನ್ನೂ ತಿನ್ನಬಾರದು ಎಂಬುದಿಲ್ಲ. ಸಸ್ಯಾಹಾರ, ಮಾಂಸಾಹಾರ ಸೇವನೆ ಮಾಡುವವರು ಇತಿಮಿತವಾಗಿ ಮಾಡಿ. ಸಂಸ್ಕರಿಸಿದ ಆಹಾರ, ರುಚಿಕರ ಪೌಡರ್, ಕಲರಿಂಗ್ ಬಳಕೆಯಂತಹ ಆಹಾರದಿಂದ ದೂರ ಇರಬೇಕಷ್ಟೇ. ಮನೆ ಆಹಾರಕ್ಕೆ ಮೊದಲ ಆದ್ಯತೆ ಕೊಡಿ ಎಂದರು.
ದಿನಕ್ಕೆ 40 ನಿಮಿಷ ವ್ಯಾಯಾಮ ಅಥವಾ ವಾಕಿಂಗ್ ಮಾಡಿದರೆ ಸಾಕು. ವಾರಕ್ಕೆ 5 ದಿನ ಇದನ್ನು ಮಾಡಿದರೆ ಹೃದಯದ ಆರೋಗ್ಯವನ್ನು ಸಮತೋಲದಲ್ಲಿ ಇಟ್ಟುಕೊಳ್ಳಬಹುದು. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಆರೋಗ್ಯಕರ ಸಮಾಜದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಆಗಲ್ಲೇ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಯಶಸ್ಸು ಪಡೆದುಕೊಳ್ಳಬಹುದು ಎಂದರು.
ದ್ವೇಷ ಯಾವತ್ತೂ ಒಳ್ಳೆಯದಲ್ಲ. ಎಷ್ಟು ದ್ವೇಷವಿದ್ದರೂ ಅದನ್ನು ಮರೆತು ಎರಡು ನಿಮಿಷ ಮಾತನಾಡಿದರೆ ಆಯುಷ್ಯ ವೃದ್ಧಿಯಾಗಲಿದೆ. ಪ್ರತಿಯೊಬ್ಬರೂ ಪರಸ್ಪರ ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಬದುಕಬೇಕು.
ಇದು ದೇಶದ ಉನ್ನತಿಗೂ ಕಾರಣವಾಗುತ್ತದೆ. ಸಹಬಾಳ್ವೆ ಸಾಧ್ಯವಾಗುವುದು ಶಿಕ್ಷಣದಿಂದ. ಶಿಕ್ಷಣದಿಂದ ಪ್ರತಿಯೊಬ್ಬರ ಉದ್ಧಾರ ಸಾಧ್ಯ ಎಂಬ ಅಂಬೇಡ್ಕರ್ ಮಾತು ಅಕ್ಷರಶಃ ಸತ್ಯ. ಕರಾಮುವಿ ಸಹ ಮನೆ ಮನೆಗೆ ಉನ್ನತ ಶಿಕ್ಷಣ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಶ್ರಮಿಕರು, ದುಡಿಯುವ ವರ್ಗದವರು ಯಾವತ್ತೂ ಅಸಮಾಧಾನವಾಗದಂತೆ ನೋಡಿಕೊಳ್ಳಬೇಕು. ಬಡ್ತಿ ಸೇರಿದಂತೆ ಇತರ ಸೌಲಭ್ಯಗಳನ್ನು ಅವರು ಕೇಳುವ ಮೊದಲೇ ಕೊಡಬೇಕು, ಅದು ನಿಜವಾದ ನಾಯಕತ್ವದ ಗುಣ ಎಂದರು.
ಅವಿಭಕ್ತ ಕುಟುಂಬದಲ್ಲಿ ಶಾಂತಿ, ಹೊಂದಾಣಿಕೆ ಇರುತ್ತದೆ, ಅಪಸ್ವರ ಕಡಿಮೆ. ಜತೆಗೆ, ವಿವೇಚನೆ, ವ್ಯಕ್ತಿತ್ವ, ಮನುಷ್ಯತ್ವ ಕಲಿಸುತ್ತದೆ. ಸಮಾಜವನ್ನು ಗೌರವಿಸುವುದನ್ನೂ ಹೇಳಿಕೊಡುತ್ತದೆ. ಇಂತಹ ಕೂಡು ಕುಟುಂಬಗಳು ಮರೆಯಾಗುತ್ತಿವೆ ಎಂದು ಕಳವಳವ್ಯಕ್ತಪಡಿಸಿದರು.
ಭಾಷೆ, ಧರ್ಮದ ಅಂಧಾಭಿಮಾನ ಹೆಚ್ಚಾಗುತ್ತಿದೆ. ಇದು ದ್ವೇಷಕ್ಕೆ ತಿರುಗುತ್ತಿದೆ. ಇದನ್ನು ಮೀರಿ ಬೆಳೆಯಬೇಕಿದೆ. ಆದರೆ, ವಿದ್ಯಾವಂತರಲ್ಲೇ ಈ ಪ್ರವೃತ್ತಿ ಕಂಡುಬರುತ್ತಿರುವುದು ಕಳವಳಕಾರಿ.
ವಿಶ್ವಮಾನವರಾಗಿ ಸಾಯಬೇಕೇ ಹೊರತು, ಅಲ್ಪಮಾನವರಾಗಿ ಸಾಯಬಾರದು. ಕಲಿತ ಶಿಕ್ಷಣ ನಾಲ್ವರಿಗೆ ಸಹಾಯವಾಗಿದ್ದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ನೆರೆಹೊರೆಯವರನ್ನು ಪ್ರೀತಿ-ಸ್ನೇಹ-ವಿಶ್ವಾಸದಿಂದ ಕಾಣುವ ಮೂಲಕ ಪರಸ್ಪರ ಸಹಕಾರ, ಸಹಾಯದಿಂದ ಬದುಕಿದಾಗಲೇ ಆರೋಗ್ಯಕರ ಸಮಾಜ ಸೃಷ್ಟಿ ಸಾಧ್ಯ. ಇದರಿಂದ ದೇಶವೂ ಬಲಿಷ್ಠವಾಗುತ್ತದೆ ಎಂದರು.
ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಏಕತಾ ದಿನ’ ಕಾರ್ಯಕ್ರಮವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಉದ್ಘಾಟಿಸಿದರು. ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಟಿ.ಪಿ.ಶಶಿಕುಮಾರ್, ಡಾ.ಕೆ.ಎಸ್.ವೀರೇಂದ್ರಕುಮಾರ್ ಇನ್ನಿತರರಿದ್ದರು.