ಸೆಸ್ಕ್ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಕ್ರಮ

ತಿ.ನರಸೀಪುರದ ಸೆಸ್ಕ್ ಉಪ ವಿಭಾಗದ ಕಛೇರಿಯಲ್ಲಿ ಗುರುವಾರ ಜನಸಂಪರ್ಕ ಸಭೆಯಲ್ಲಿ ಎಇಇ ಕೆ.ವಿ.ವೀರೇಶ್ ಮಾತನಾಡಿದರು. ಚಂದ್ರಕಲಾ, ಗೀತಾ, ರಂಗಸ್ವಾಮಿ, ಸೋಮ, ನಾಗರಾಜು ಇದ್ದರು.
ತಿ.ನರಸೀಪುರದ ಸೆಸ್ಕ್ ಉಪ ವಿಭಾಗದ ಕಛೇರಿಯಲ್ಲಿ ಗುರುವಾರ ಜನಸಂಪರ್ಕ ಸಭೆಯಲ್ಲಿ ಎಇಇ ಕೆ.ವಿ.ವೀರೇಶ್ ಮಾತನಾಡಿದರು. ಚಂದ್ರಕಲಾ, ಗೀತಾ, ರಂಗಸ್ವಾಮಿ, ಸೋಮ, ನಾಗರಾಜು ಇದ್ದರು.
Published on

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ವಿ.ವೀರೇಶ್ ಹೇಳಿಕೆ

ತಿ.ನರಸೀಪುರ: ಸೆಸ್ಕ್ ಉಪ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ರೈತರು ಹಾಗೂ ಸಾರ್ವಜನಿಕರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಸ್ವಾಭಾವಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ವಿ.ವೀರೇಶ್ ಹೇಳಿದರು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗದ ಕಛೇರಿಯಲ್ಲಿ ಗುರುವಾರ ಮೈಸೂರು ವೃತ್ತದ ಅಧೀಕ್ಷಕ ಇಂಜಿಯರ್ ಅವರ ಸೂಚನೆಯಂತೆ ನಡೆದಂತಹ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿ, ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖವಾದ ಸಮಸ್ಯೆಗಳು ಕಂಡುಬಂದಿಲ್ಲ. ಸಾರ್ವಜನಿಕರು, ಸಭೆಯಲ್ಲಿ ರೈತರು ನೀಡಿರುವ ಸಲಹೆ-ಸೂಚನೆಯನ್ನು ಪರಿಗಣಿಸಿ ನಿಯಮಾನುಸಾರ ಕೆಲಸ ಮಾಡಲಾಗುತ್ತದೆ ಎಂದರು.
ಕೆಲವರು ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳಿಗೆ ದೂರವಾಣಿ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಸ್ಪಂದಿಸುತ್ತಿಲ್ಲ ಎಂಬ ದೂರು ನೀಡಿದ್ದಾರೆ. ಹಾಗಾಗಿ ತಾಲೂಕಿನ ಆಯಾ ಪ್ರದೇಶಕ್ಕೆ ಸೇರಿದ ಜೆಇಗಳ ವಾಟ್ಸ್‌ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿದ್ದು ಗ್ರಾಹಕರು, ರೈತರು ಯಾವುದೇ ಸಮಸ್ಯೆಗಳಿದ್ದಲ್ಲಿ ಆ ನಂಬರ್‌ಗೆ ದೂರು ಸಲ್ಲಿಸಬಹುದು. ದೂರಿಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಕಿರಗಸೂರು ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳು ಶಿಥಿಲವಾಗಿ ಮುರಿದು ಬೀಳುವ ಹಂತ ತಲುಪಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಕಂಬ ಬದಲಾವಣೆ ಮಾಡಿಲ್ಲ ಎಂದು ರೈತ ಮುಖಂಡ ಪ್ರಸಾದ್ ನಾಯಕ್ ದೂರಿದರು.
ಹೆಮ್ಮಿಗೆಯ ಮಾಧವಮಂತ್ರಿ ಕಿರು ವಿದ್ಯುತ್ ಜಲ ಘಟಕಕ್ಕಾಗಿ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದ ನದಿಯಲ್ಲಿ ನಿರ್ಮಿಸಲಾಗಿದ್ದ, 33 ಕೆವಿ ವಿದ್ಯುತ್ ಟವರ್ ಪ್ರವಾಹ ಬಂದ ವೇಳೆ ಬಿದ್ದು ಹೋಗಿದ್ದು ಅದನ್ನು ತೆರವುಗೊಳಿಸುವಂತೆ ಬಿಜೆಪಿ ಮುಖಂಡ ಎನ್.ಲೋಕೇಶ್ ಮನವಿ ಸಲ್ಲಿಸಿದರು.
ಈ ವೇಳೆ ಯಾವುದೇ ಪ್ರಮುಖ ಸಮಸ್ಯೆಗಳು ಸಭೆಯಲ್ಲಿ ದಾಖಲಾಗಲಿಲ್ಲ. ಎಇಇ ವೀರೇಶ್ ರೈತರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಇಲಾಖೆಯ ಸೆಸ್ಕ್ ಸಹಾಯಕ ಇಂಜಿನಿಯರ್ ಚಂದ್ರಕಲಾ, ಕಿರಿಯ ಇಂಜಿನಿಯರ್‌ಗಳಾದ ಗೀತಾ, ರಂಗಸ್ವಾಮಿ, ಸೋಮ, ನಾಗರಾಜು ಹಾಗೂ ಸಹಾಯಕ ಮಹೇಶ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net