ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಅಸಹಕಾರ

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಯೋಜನೆಗಳಿಗೆ ಅಡ್ಡಗಾಲು
ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ನಡೆದಿರುವ ರೈಲ್ವೆ ಯೋಜನೆಗಳ ಜಾರಿಗೆ ಅಸಹಕಾರ ತೋರುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದರು.
ಹಿಂದೆ ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಜಾರಿ ಮಾಡಲಾಗುತ್ತಿತ್ತು. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಟ್ಟರೆ ಕೇಂದ್ರ ರೈಲ್ವೆ ಇಲಾಖೆ ಕಾಮಗಾರಿ ಕೈಗೊಳ್ಳುತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಸಹಕಾರವನ್ನೇ ನೀಡುತ್ತಿಲ್ಲ. ಇದರೊಂದಿಗೆ ರೈಲ್ವೆ ಯೋಜನೆಗಳಿಗೆ ಅಡ್ಡಗಾಲು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು-ಚಾಮರಾಜನಗರ ರೈಲ್ವೆ ಯೋಜನೆ ನಮ್ಮಿಂದ ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಪತ್ರ ಬರೆದಿದೆ. ಮೈಸೂರು-ಕುಶಾಲನಗರ ಯೋಜನೆಗೂ ಬೆಂಬಲ ನೀಡುತ್ತಿಲ್ಲ. ರಾಜ್ಯ ಸರ್ಕಾರ ಸಹಕಾರ ನೀಡಿದರೆ ಈ ಎರಡೂ ಯೋಜನೆಗಳ ಜಾರಿಗೆ ಸಿದ್ಧ ಮತ್ತು ಬದ್ಧ ಎಂದು ತಿಳಿಸಿದರು.
‘ಸೋಮಣ್ಣನಿಗೆ ಯಾವುದೇ ಫೈಲ್ ಬರುವುದಿಲ್ಲ. ಜತೆಗೆ ಕೆಲಸ ಇಲ್ಲ. ಹಾಗೇ ಕಾಲ ಕಳೆಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 500 ಕೋಟಿ ರೂ. ಕಾಮಗಾರಿಗಳಿಗೆ ಅಧಿಕಾರಿಗಳು ಟೆಂಡರ್ ಕರೆಯುವ ಅಧಿಕಾರ ಇದೆ. ರೈಲ್ವೆಯಲ್ಲಿ ಪಾರದರ್ಶಕತೆ ಇದೆ. ನನ್ನ ಬಳಿ ಫೈಲ್ ಬರದಿದ್ದರೂ ಜನರ ಪರವಾಗಿ ಕೆಲಸ ಮಾಡಿಸುವುದು ಗೊತ್ತಿದೆ.
 ಸಣ್ಣ ಅಪಚಾರಕ್ಕೂ ಅವಕಾಶ ಇಲ್ಲ ಎಂದು ಸೋಮಣ್ಣ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಹತಾಶೆಗೊಂಡು ಹೊಟ್ಟೆ ಉರಿಯಿಂದ ದ್ವೇಷ ಕಾರುತ್ತಿದ್ದಾರೆ. ಅವರು ಸಣ್ಣಪುಟ್ಟ ಭಾಗ್ಯ ಕೊಟ್ಟು ಅಭಿವೃದ್ಧಿ ಬಿಟ್ಟು ಬೇರೆಲ್ಲ ಮಾತಾಡುತ್ತಿದ್ದಾರೆ. 17 ಬಾರಿ ಬಜೆಟ್ ಮಂಡಿಸಿದರೂ ರಾಜ್ಯ ಪ್ರಗತಿ ಕಾಣುತ್ತಿಲ್ಲ. ಆಡಳಿತವೂ ಹಳಿ ತಪ್ಪಿದೆ. ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಗಳಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಉಪ ಚುನಾವಣೆಗಳ ಕೊಟ್ಟ ಪ್ರಾಶಸ್ತ್ಯವನ್ನು ರಾಜ್ಯದ ಅಭಿವೃದ್ಧಿಗೂ ಕೊಟ್ಟಿಲ್ಲ ಎಂದು ಕುಟುಕಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಡಿಆರ್‌ಎಂ ಮುದಿತ್ ಮುದ್ಗಲ್, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್‌ಕುಮಾರ್, ಡಿ.ಸಿ.ತಮ್ಮಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net