ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ : ಎಚ್. ವಿಶ್ವನಾಥ್

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
Published on
ಮೈಸೂರು: ಗ್ಯಾರಂಟಿ ಯೋಜನೆಯು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದು, ಕೂಡಲೇ ಯೋಜನೆಯ ಕುರಿತು ಸರ್ವೇ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪ್ರಯೋಜನ, ಬದಲಾವಣೆ ಹಾಗೂ ಆರ್ಥಿಕ ಹೊರೆಯ ಕುರಿತು ಸರ್ವೇ ನಡೆಸಬೇಕು. ಗ್ಯಾರಂಟಿ ಯೋಜನೆಗಳನ್ನು ನೀಡುವ ಸರ್ಕಾರಗಳ ವಿರುದ್ಧ ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿದೆ. ಜನರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಅದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಉಚಿತ ಕೊಡುಗೆಗಳನ್ನು ನೀಡುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೆಳೀದರು.
ಪಿಂಚಣಿ ಪಡೆಯಲು 65 ವರ್ಷ, ವಿಶೇಷಚೇತನರ ಪಿಂಚಣಿಗೆ ಶೇ.70ರಷ್ಟು ದೈಹಿಕ ಅಂಗವಿಕಲತೆ ಇರಬೇಕು. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸೂಕ್ತ ಮಾನದಂಡ ರೂಪಿಸದೆ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಅರ್ಥಿಕಪರಿಸ್ಥಿತಿಯನ್ನು ದಿವಾಳಿಯತ್ತ ತಲುಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಸಾಲ 7.50 ಲಕ್ಷ ಕೋಟಿ ರೂ. ಇದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 5 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವ ಅನುದಾನವನ್ನು ಕೃಷ್ಣ ಮೇಲ್ದಂಡೆ ಯೋಜನೆಗೆ ಖರ್ಚು ಮಾಡಿದ್ದರೆ ಲಕ್ಷಾಂತರ ಎಕರೆ ಪ್ರದೇಶಗಳಿಗೆ ನೀರಾವರಿ ಒದಗಿಸಬಹುದಿತ್ತು, ರೈತರ ಬದುಕು ಚೆನ್ನಾಗಿರುತ್ತಿತ್ತು ಎಂದರು.
ಸಿದ್ದರಾಮಯ್ಯ ಜನರಿಗೆ ಹೆಂಡ ಕುಡಿಸಿ ವಾರ್ಷಿಕ 45 ಸಾವಿರ ಕೋಟಿ ರೂಪಾಯಿ ಆದಾಯ ಬರುವಂತೆ ಮಾಡಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದೀಗ ಸಿದ್ದರಾಮಯ್ಯ ಜಾತಿ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದಕ್ಕೆ ಮುಂದಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಡುವುದು ಇರಲಿ, ನಿಮಗೆ ತನುಮನ-ಧನ ಎರೆದಿರುವ ಕುರುಬ ಸಮಾಜಕ್ಕೆ ಯಾವ ಕಾರ್ಯಕ್ರಮ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net