ಪಿರಿಯಾಪಟ್ಟಣ: ಪಟ್ಟಣದ ಒಳಕೋಟೆ ಬಡಾವಣೆಯಲ್ಲಿರುವ ಶ್ರೀ ವೈದ್ಯೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಹಾ ಶಿವರಾತ್ರಿ ಹಬ್ಬದ ಮಾರನೇ ದಿನದಂದು ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಬೆಳಗಿನಿಂದಲೇ ದೇವಾಲಯದಲ್ಲಿ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ಸಾಗಿದವು. ಅಧಿವಾಸ ಹೋಮ, ರಥ ಶುದ್ಧಿ, ಕಲಶಾಭಿಷೇಕ, ಮಹಾಮಂಗಳಾರತಿ ಮತ್ತಿತರ ಪೂಜಾ ವಿಧಿ ವಿಧಾನಗಳ ಬಳಿಕ ಶ್ರೀ ವೈದ್ಯೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತಲೂ 3 ಬಾರಿ ಪ್ರದಕ್ಷಿಣೆ ನಡೆಸಲಾಯಿತು. ಬಳಿಕ ಬಗೆಬಗೆಯ ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡಿದ್ದ ರಥದ ಬಳಿ ಉತ್ಸವ ಮೂರ್ತಿಯನ್ನು ತಂದು ರಥದ ಸುತ್ತ ಪ್ರದಕ್ಷಿಣೆ ನಡೆಸಿ 12.15 ರ ಶುಭ ಲಗ್ನದಲ್ಲಿ ಮಹಾ ಮಂಗಳಾರತಿ ಪೂಜೆ ಸಲ್ಲಿಸಲಾಯಿತು.
ನಂತರ ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಭಕ್ತರು ಸ್ವಾಮಿಯ ವಿರಾಜಮಾನವಾದ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ದೇವಾಲಯದ ಮುಂಭಾಗದ ನಂದಿ ಗುಡ್ಡದವರೆಗೆ ರಥವನ್ನು ಎಳೆದು ನಿಲ್ಲಿಸಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಅರ್ಪಿಸಿದರು.
ರಥೋತ್ಸವದ ಬಳಿಕ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಶ್ರೀ ವೈದ್ಯೇಶ್ವರ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು. ಮಧ್ಯಾಹ್ನ 12.30 ಗಂಟೆಗೆ ಆರಂಭಗೊಂಡ ಅನ್ನದಾಸೋಹ ಸಂಜೆವರೆಗೂ ಮುಂದುವರಿದಿತ್ತು. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರಾದ ಮುರಳಿ, ರಮೇಶ್ ಅಡಿಗ, ವೆಂಕಟಸುಬ್ಬು, ಷಣ್ಮುಖರಾವ್, ತಮ್ಮಣ್ಣಯ್ಯ, ರಾಮು, ಪಿ.ಎಸ್.ಹರೀಶ್, ಶ್ರೀನಿವಾಸ್, ಸುರೇಶ್, ರವಿ, ಮೂರ್ತಿ, ವಿಷಕಂಠಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.