ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ

ಹುಣಸೂರು ನಗರದ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ರಥೋತ್ಸವ  ವಿಜೃಂಭಣೆಯಿಂದ ನೆರವೇರಿತು.
ಹುಣಸೂರು ನಗರದ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ಹುಣಸೂರು : ನಗರದ ಬ್ರಾಹ್ಮಣರಬೀದಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ 190ನೇ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ರಥಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ್ದು ಈ ಬಾರಿಯ ವಿಶೇಷವಾಗಿತ್ತು.
ನಗರದ ಮಧ್ಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿದಂಡೆಯಲ್ಲಿರುವ ಐತಿಹಾಸಿಕ ಮಹತ್ವವುಳ್ಳ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ರಥೋತ್ಸವಕ್ಕೂ ಮುನ್ನ ಅರ್ಚಕ ಗುರುರಾಜ್ ಧಾರ್ಮಿಕ ವಿಧಿವಿಧಾನ ನಡೆಸಿದರು. ನಂತರ ಪುಷ್ಪಾರ್ಚನೆ ಚಾಲನೆ ದೊರೆತ ಕೂಡಲೇ ನೆರದ ಭಕ್ತರ ಉದ್ಘೋಷಗಳನ್ನು ಮೊಳಗುತ್ತ ರಥದ ಎಳೆದರು. ಎಚ್.ಡಿ.ಕೋಟೆ ವೃತ್ತದವರೆಗೆ ರಥ ಸಾಗಿ ಮತ್ತೆ ದೇಗುಲಕ್ಕೆ ಮರಳಿತು.

ಈ ವೇಳೆ ಮಾತನಾಡಿದ ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ತಲತಲಾಂತರ ವರ್ಷಗಳಿಂದ ಬ್ರಾಹ್ಮಣ ಸಮಾಜ ಪೂಜಾ ಕೈಂಕರ್ಯ ನಡೆಸುತ್ತಿರುವ ಈ ದೇಗುಲದ ರಥೋತ್ಸವ ತಾಲೂಕಿಗೆ ಅತ್ಯಂತ ಪ್ರಮುಖವಾದುದು. ರಥೋತ್ಸವ ಚಾಲನೆಗೆ ನನ್ನನ್ನು ಕರೆಯಿಸಿ ಅವಕಾಶ ನೀಡಿದ್ದು, ಆ ಮೂಲಕ ವಿಶೇಷ ಸಂದೇಶವನ್ನು ರವಾನಿಸಲಾಗಿದೆ. ಜಾತೀಯತೆ, ಅಸ್ಪಶ್ಯತೆ ಹೋಗಲಾಡಿಸಿ ಸಮಾನತೆಯತ್ತ ನಾವೆಲ್ಲರೂ ಒಂದಾಗಿ ಬಾಳಬೇಕಾದ ಸಂದರ್ಭ ಇದಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯಕ್ಕೆ ಹೆಸರಾದ ಹುಣಸೂರು ಇದೀಗ ಮತ್ತೆ ಎಲ್ಲರಿಗೂ ಮೇಲ್ಪಂಕ್ತಿ ಹಾಕುವ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದೆ ಎಂದರು.

ರಥೋತ್ಸವದಲ್ಲಿ ನಗರಸಭೆ ಮಾಜಿ ಸದಸ್ಯ ಹರೀಶ್‌ಕುಮಾರ್, ಸ್ವಾಮಿಗೌಡ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಭಾಸ್ಕರ್‌ಭಟ್, ಅರ್ಚಕ ಚಂದ್ರಮೌಳಿ, ರಾಘವೇಂದ್ರ ಮಠದ ಪುರೋಹಿತ ನಾರಾಯಣಮೂರ್ತಿ, ಶ್ರೀಹರಿ, ಸುರೇಶ್ ಐತಾಳ್, ಶಿವಕುಮಾರ್ ಕೊಳ್ಳೇಗಾಲ, ಎಬಿವಿಪಿ ಶ್ರೀದತ್ತ, ಏಕಾಂತ್, ಮಾದೇವ, ಅಮಿತ್, ರಾಜು, ಮಂಜುನಾಥ್, ಪವನ್, ಶಿವಕುಮಾರ್, ನಂದಿ, ಮಹೇಶ್ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net