ಗೊರಹಳ್ಳಿಯಲ್ಲಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ ನಾಳೆ

ಗೊರಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಶ್ರೀ ದೊಡ್ಡಮ್ಮ ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವ ತೇರು.
ಗೊರಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಶ್ರೀ ದೊಡ್ಡಮ್ಮ ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವ ತೇರು.
Published on
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಮೇ 22ರಂದು ರಾತ್ರಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ ನಡೆಯಲಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಮೂರು ವರ್ಷದ ಬಳಿಕ ಗೊರಹಳ್ಳಿ, ಕುಳ್ಳಯ್ಯಕೊಪ್ಪಲು, ಕರಡಿಪುರ ಹಾಗೂ ದೇವಿನಗರ ಗ್ರಾಮದ ಎಲ್ಲ ಸಮುದಾಯದ ಜನಾಂಗದವರು ಒಟ್ಟಾಗಿ ಸೇರಿ ಶ್ರೀ ದೊಡ್ಡಮ್ಮ ತಾಯಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ತಲತಲಾಂತರಗಳಿಂದ ಗ್ರಾಮದ ಕಲ್ಯಾಣ ಮತ್ತು ಯಾವುದೇ ದುಷ್ಟಶಕ್ತಿಗಳು ಬಾರದಂತೆ ಹಬ್ಬವನ್ನು ಆಚರಣೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಶುಕ್ರವಾರ ಬೆಳಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಗುಡಿಯಲ್ಲಿನ ಶ್ರೀ ದೊಡ್ಡಮ್ಮ ತಾಯಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ ಪಲ್ಲಕ್ಕಿ ಮೇಲೆ ಕುರಿಸಿ ತೇರಿನ ಸುತ್ತ ವಾದ್ಯದೊಂದಿಗೆ ಮೂರು ಪ್ರದಕ್ಷಣೆ ಹಾಕಿ ಬಳಿಕ ಶುಭಲಗ್ನದಲ್ಲಿ ರಥದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ನಂತರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿಂದ ಹೊರವಲಯದಲ್ಲಿರುವ ಶ್ರೀ ದೊಡ್ಡಮ್ಮ, ಶ್ರೀ ಚಿಕ್ಕಮ್ಮ ತಾಯಿ ದೇವಸ್ಥಾನದವರೆಗೆ ರಥೋತ್ಸವ ನಡೆಯಲಿದೆ.
ರಥೋತ್ಸವ ನಡೆಯುವ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು, ಡೊಳ್ಳು ಕುಣಿತದ ಮೂಲಕ ದೇವಿಯನ್ನು ಭಕ್ತಾದಿಗಳು ಆರಾಧಿಸಲಿದ್ದಾರೆ. ಬಳಿಕ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದ ಸಮೀಪಕ್ಕೆ ರಥವು ಆಗಮಿಸದ ನಂತರ ವಿಶೇಷ ಪೂಜೆಗಳು ನಡೆಯುತ್ತವೆ. ಇದೇ ವೇಳೆ ಭಕ್ತಾದಿಗಳು ಕೊಂಡ ಹಾಯುವ ಮತ್ತು ದೇವಿಗೆ ಎಡೆ ಇಡುವ ಮೂಲಕ ಹಬ್ಬ ಆಚರಣೆ ಮಾಡಿ ಸಂಭ್ರಮಿಸುತ್ತಾರೆ. ಕುಟುಂಬದಲ್ಲಿ ಸಮಸ್ಯೆ, ಸಂತಾನ ಭಾಗ್ಯ, ಮದುವೆ ಭಾಗ್ಯ, ಅನಾರೋಗ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳು ನಿವಾರಣೆ ಆಗಲೆಂದು ತಾಯಿಗೆ ಹರಕೆ ಮಾಡಿಕೊಂಡವರು, ವಿಭಿನ್ನ ರೀತಿಯಲ್ಲಿ ಹರಕೆ ತೀರಿಸಿ ಆರಾಧಿಸುತ್ತಾರೆ. ದೊಡ್ಡಮ್ಮ ತಾಯಿ ಹಬ್ಬದ ಬಳಿಕ ಶ್ರೀ ಚಿಕ್ಕಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ರಥದ ಸಿಂಗಾರ, ಅಲಂಕಾರ ಜೋರಾಗಿ ನಡೆಯುತ್ತಿದೆ. ಗ್ರಾಮದಲ್ಲಿ ಈಗಾಗಲೇ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರಗಳು ಕಂಗೊಳಿಸುತ್ತಿವೆ. ಗ್ರಾಮದ ಪ್ರಮುಖ ಬೀದಿ, ವೃತ್ತಗಳಲ್ಲಿ ಕೇಸರಿ ತೋರಣಗಳು ರಾರಾಜಿಸುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net