ಮಾತಿಗಿಂತ ಕೃತಿಯೇ ದೊಡ್ಡದೆಂದು ಬದುಕಿದ ಶ್ರೀ ಚಿದಾನಂದ ಸ್ವಾಮೀಜಿ ಲಿಂಗಕೈ

ಶ್ರೀ ಚಿದಾನಂದ ಸ್ವಾಮೀಜಿ
ಶ್ರೀ ಚಿದಾನಂದ ಸ್ವಾಮೀಜಿ
Published on

ಮೈಸೂರು: ಮಾತಿಗಿಂತ ಕೃತಿಯೇ ದೊಡ್ಡದು ಎಂದು ಬದುಕಿನುದ್ದಕ್ಕೂ ತೋರಿಸಿಕೊಟ್ಟ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಗುರುವಾರ ಮಧ್ಯಾಹ್ನ ಲಿಂಗೈಕ್ಯರಾದರು. 79 ವರ್ಷಗಳ ಸಾರ್ಥಕ ಬದುಕನ್ನು ಸಮಾಜ ಸೇವೆಗೆ ಸಮರ್ಪಿಸಿದ್ದ ಶ್ರೀಗಳ ಅಗಲಿಕೆ, ಮೈಸೂರು ಮಾತ್ರವಲ್ಲದೆ ನಾಡಿನ ಭಕ್ತರು ಹಾಗೂ ಅಭಿಮಾನಿಗಳ ಮನದಲ್ಲಿ ತುಂಬಲಾರದ ಶೂನ್ಯವನ್ನು ಸೃಷ್ಟಿಸಿದೆ.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು.
ಶ್ರೀ ಚಿದಾನಂದ ಸ್ವಾಮೀಜಿ ಸಭೆ, ಸಮಾರಂಭಗಳ ವೇದಿಕೆಗಳಲ್ಲಿ ಮಾತನಾಡುವ ಸ್ವಾಮೀಜಿಯಾಗಿರಲಿಲ್ಲ. ಬದಲಿಗೆ, ಅವರ ಮೌನವೇ ಅವರ ಸಂದೇಶವಾಗಿತ್ತು. ಮಾತುಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತಷ್ಟು ಮಾತನಾಡಿ ಮಾತಿನ ಘನತೆಯನ್ನು ಕುಗ್ಗಿಸಬಾರದು ಎಂಬುದು ಅವರ ನಿಲುವಾಗಿತ್ತು. ಆದರೆ ಅವರ ಮೌನ ಎಂದೂ ನಿಷ್ಕ್ರಿಯವಾಗಿರಲಿಲ್ಲ. ಆ ಮೌನದ ಹಿಂದೊಂದು ದೊಡ್ಡ ಸಮಾಜಮುಖಿ ಚಿಂತನೆ ಇತ್ತು. ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಜ್ಞಾನ ದಾಸೋಹದ ಮೂಲಕ ಅವರು ಸಾವಿರಾರು ಬದುಕುಗಳಿಗೆ ಬೆಳಕಾದರು. ನುಡಿದಂತೆ ನಡೆಯುವುದು ಕಷ್ಟವಾಗುತ್ತಿರುವ ಕಾಲದಲ್ಲಿ, ಅವರು ನುಡಿಯುವುದಕ್ಕಿಂತ ನಡೆದು ತೋರಿಸಿದರು. ವೇದಿಕೆಯಲ್ಲಿ ಭಾಷಣ ಮಾಡದೆ, ಸಮಾಜದ ನಡುವೆ ಕೆಲಸ ಮಾಡುವ ಮೂಲಕ ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು: 90ರ ದಶಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇಂದಿನಷ್ಟು ಪ್ರೋತ್ಸಾಹವಿರಲಿಲ್ಲ. ಶಿಕ್ಷಣ ಪಡೆಯಲು ಆಸೆ ಇದ್ದರೂ ವಸತಿ ಸೌಲಭ್ಯಗಳ ಕೊರತೆಯಿಂದ ಅನೇಕ ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮೊಟರುಗೊಳಿಸುವ ಪರಿಸ್ಥಿತಿ ಇತ್ತು. ಈ ವಾಸ್ತವವನ್ನು ಅರಿತ ಶ್ರೀ ಚಿದಾನಂದ ಸ್ವಾಮೀಜಿ 1992-93ನೇ ಸಾಲಿನಲ್ಲಿ ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿ ನಿಲಯ ಆರಂಭಿಸಿದರು. ಸಂಪ್ರದಾಯಸ್ಥರಿಂದ ವಿರೋಧ ವ್ಯಕ್ತವಾದರೂ ಅವರು ಹಿಂದೆ ಸರಿಯಲಿಲ್ಲ. ‘ಹೆಣ್ಣುಮಗು ಓದಿದರೆ ಒಂದು ಕುಟುಂಬವೇ ಬೆಳಗುತ್ತದೆ’ ಎಂಬ ನಂಬಿಕೆಯೊಂದಿಗೆ ಶಿಕ್ಷಣದ ಬಾಗಿಲು ತೆರೆದರು. ಅಂದು ಅವರು ತೆಗೆದುಕೊಂಡ ಆ ನಿರ್ಧಾರ ಇಂದು ಎಷ್ಟು ದೂರದೃಷ್ಟಿಯದ್ದಾಗಿತ್ತು ಎಂಬುದನ್ನು ಕಾಲವೇ ಸಾಬೀತುಪಡಿಸಿದೆ.
ಭಕ್ತರ ಮನ ಗೆದ್ದ ಸರಳತೆ: ಶ್ರೀಗಳ ಸರಳತೆ ಅವರ ವ್ಯಕ್ತಿತ್ವದ ಮತ್ತೊಂದು ದೊಡ್ಡ ಆಭರಣವಾಗಿತ್ತು. ಶುಭಕಾರ್ಯಗಳಿರಲಿ, ಭಕ್ತರ ಮನೆಗಳಲ್ಲಿ ದುಃಖದ ಸಂದರ್ಭವಿರಲಿ ಅವರು ಸ್ವತಃ ತೆರಳಿ ಆತ್ಮೀಯವಾಗಿ ವಿಚಾರಿಸುತ್ತಿದ್ದರು. ಆದರೆ ಯಾರಿಂದಲೂ ಹಣ ಸ್ವೀಕರಿಸುತ್ತಿರಲಿಲ್ಲ. ಭಕ್ತರು ಒತ್ತಾಯದಿಂದ ಫಲಕಾಣಿಕ ಅಥವಾ ಹಣ ನೀಡಿದರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಅವರಿಗೇ ಮರಳಿಸುತ್ತಿದ್ದರು. ಸೇವೆ ಪ್ರತಿಫಲಕ್ಕಾಗಿ ಅಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ಅವರು ತೋರಿಸಿಕೊಟ್ಟರು.
ಅದ್ದೂರಿ ವಿವಾಹ, ಆಡಂಬರದ ಬದುಕಿನ ಬಗ್ಗೆ ಅವರು ಸದಾ ಎಚ್ಚರಿಸುತ್ತಿದ್ದರು. ಮದುವೆಯೊಂದಕ್ಕಾಗಿ ಸಾಲ ಮಾಡಿ, ನಂತರ ಇಡೀ ಬದುಕನ್ನು ನರಕ ಮಾಡಿಕೊಳ್ಳಬಾರದು. ಸರಳ ವಿವಾಹಕ್ಕೆ ಆದ್ಯತೆ ನೀಡಿ, ಮಿತವಾದ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬೇಕು ಎಂಬುದು ಅವರ ಕಿವಿಮಾತಾಗಿತ್ತು. ತಾವು ಹೇಳಿದ್ದನ್ನು ಮೊದಲು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ನಂತರ ಸಮಾಜಕ್ಕೆ ಹೇಳಿದವರು ಅವರು. ಹೀಗಾಗಿಯೇ ಅವರ ಸರಳ ಬದುಕೇ ಅನೇಕರಿಗೆ ಪಾಠವಾಯಿತು.
ನೂತನ ಉತ್ತರಾಧಿಕಾರಿ
ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಠದ ಮುಂದಿನ ಉತ್ತರಾಧಿಕಾರಿಯಾಗಿ 2025ರ ಸೆಪ್ಟೆಂಬರ್ 4 ರಂದು 16 ವರ್ಷದ ಸಿದ್ದಬಸವ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿತ್ತು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಸಿದ್ಧಬಸವ ಸ್ವಾಮೀಜಿ ಇದೀಗ ಹೊಸಮಠದ ಮುಂದಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಶ್ರೀಗಳ ಪೂರ್ವಾಶ್ರಮ
ತಿ.ನರಸೀಪುರ ತಾಲೂಕು ಮುಡುಕನಪುರ ಸಿದ್ಧಬಸವದೇವರು ಮತ್ತು ಮರಿಲಿಂಗಮ್ಮ ದಂಪತಿಯ ಮಗನಾಗಿ 1950 ಫೆಬ್ರವರಿ 1 ರಂದು ಜನಿಸಿದ ಶ್ರೀ ಚಿದಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಎಸ್. ಚಂದ್ರಶೇಖರಸ್ವಾಮಿ. ತಂದೆ ಸಿದ್ದಬಸವದೇವರು, ಗುರುಶಾಂತಸ್ವಾಮೀಜಿ ಅವರ ಪೂರ್ವಾಶ್ರಮದ ಅಣ್ಣ.
ಗುರುಶಾಂತಸ್ವಾಮೀಜಿ ತಮ್ಮ ನಂತರದ ಉತ್ತರಾಧಿಕಾರಿಯನ್ನಾಗಿ ಶ್ರೀ ಚಿದಾನಂದ ಸ್ವಾಮೀಜಿ ಅವರನ್ನು ನೇಮಿಸಿದರು. ಶ್ರೀ ಹೊಸಮಠ ಪೀಠದ 19ನೇಯ ಪೀಠಾಧಿಪತಿಯಾಗಿ ಶ್ರೀ ಗುರುಶಾಂತಸ್ವಾಮೀಜಿ (1920-1995) ಸೇವೆ ಸಲ್ಲಿಸಿದ್ದರು. 1982ರಲ್ಲಿ ಮಠವನ್ನು ಮುನ್ನಡೆಸುವ ಜವಾಬ್ದಾರಿ ಶ್ರೀ ಚಿದಾನಂದ ಸ್ವಾಮೀಜಿ ಅವರಿಗೆ ವಹಿಸಲಾಯಿತು. ಶ್ರೀ ಚಿದಾನಂದ ಸ್ವಾಮೀಜಿ ಅವರನ್ನು ಮಠದ ಉತ್ತರಾಧಿಕಾರಿ ಮಾಡುವ ಸಲುವಾಗಿ 1957ರಲ್ಲಿ ಕರೆತರಲಾಗಿತ್ತು.
ಶ್ರೀ ಚಿದಾನಂದ ಸ್ವಾಮೀಜಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಳವಾಯಿ ವಿದ್ಯಾಸಂಸ್ಥೆಯಲ್ಲಿ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವನ್ನು ಶಾರದಾವಿಲಾಸ ಮಾಧ್ಯಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ ಪೂರ್ಣ ಗೊಳಿಸಿದರು. ನಂತರ ಮಹಾರಾಜ ಕಾಲೇಜಿನಲ್ಲಿ ಪಿಯುಸಿಯಿಂದ ಬಿ.ಎ.ವರೆಗೆ ವ್ಯಾಸಂಗ ಮಾಡಿದರು.
ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಮೂರು ವರ್ಷಗಳ ಸಾಹಿತ್ಯ ಪರೀಕ್ಷೆ ಓದಿದರು. ಮುಂದೆ ತಮ್ಮ ಹಿರಿಯ ಗುರುಗಳ ಆಶಯದಂತೆ ಜೆ.ಎಸ್.ಎಸ್. ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಚಿದಾನಂದ ಸ್ವಾಮೀಜಿ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿಮಠದ ಕಾರ್ಯಗಳಲ್ಲೂ ಕೆಲವು ವರ್ಷಗಳ ಕಾಲ ತೊಡಗಿಸಿಕೊಂಡರು. ಶ್ರೀ ಗೌರಿಶಂಕರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಕೆಲ ಕಾಲ ಅದರ ಆರಂಭಿಕ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇಂದು ಲಿಂಗೈಕ್ಯ ಸಂಸ್ಕಾರ
ಗುರುವಾರ ನಿಧನರಾದ ಶ್ರೀದಾನಂದ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 9ಗಂಟೆವರೆಗೆ ಇಡಲಾಗುವುದು. ನಂತರ ಮೆರವಣಿಗೆಯಲ್ಲಿ ಕಾಡಾ ಕಚೇರಿ ಬಳಿಯ ಬಸವೇಶ್ವರ ಪುತ್ಥಳಿಗೆ ಕೊಂಡೊಯ್ದು ಅಲ್ಲಿಂದ ಅಗ್ರಹಾರ, ಬಸವೇಶ್ವರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಠದ ಆವರಣಕ್ಕೆ ಹಿಂತಿರುಗಲಾಗುವುದು. ನಂತರ ಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಲಿಂಗೈಕ್ಯ ಸಂಸ್ಕಾರ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net