ಶ್ರೀ ಆದಿಶಂಕರಚಾರ್ಯರು ಜಗತ್ತಿಗೆ ಮಾದರಿ

 ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಯಂತಿಯಲ್ಲಿ ಶ್ರೀ ಶಂಕರಚಾರ್ಯರ ಭಾವಚಿತ್ರಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಪುಷ್ಪನಮನ ಸಲ್ಲಿಸಿದರು. ಸ್ವಾಮಿ ಸರ್ವಜಯಾನಂದಜಿ, ಗಾ.ನಾ.ಭಟ್, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ ಸುದರ್ಶನ್ ಇನ್ನಿತರರಿದ್ದರು.
ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಯಂತಿಯಲ್ಲಿ ಶ್ರೀ ಶಂಕರಚಾರ್ಯರ ಭಾವಚಿತ್ರಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಪುಷ್ಪನಮನ ಸಲ್ಲಿಸಿದರು. ಸ್ವಾಮಿ ಸರ್ವಜಯಾನಂದಜಿ, ಗಾ.ನಾ.ಭಟ್, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ ಸುದರ್ಶನ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ.ಎಸ್.ಶ್ರೀವತ್ಸ ಅಭಿಮತ
  • ಶ್ರೀ ಶಂಕರಚಾರ್ಯರ ಜಯಂತಿ
ಮೈಸೂರು: ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಮಾದರಿಯಾದವರು ಆದಿಶಂಕರಚಾರ್ಯರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು. 
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಶ್ರೀ ಶಂಕರಾಚಾರ್ಯ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಶಂಕರಚಾರ್ಯರ ಜಯಂತಿಯಲ್ಲಿ ಮಾತನಾಡಿದರು.
ಶಂಕರಾಚಾರ್ಯರು ಇಡೀ ಭಾರತವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿ, ಅದ್ವೈತ ಸಿದ್ಧಾಂತ ಪ್ರತಿಪಾದಿಸಿದರು. ಅಂದಾಜು 300 ಶ್ಲೋಕ ರಚಿಸಿದ್ದು, ಅವುಗಳಲ್ಲಿ ‘ಭಜಗೋವಿಂದಂ’ ಶ್ರೇಷ್ಠವಾದ ಶ್ಲೋಕ ಎಂದರು. 
ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರ್ಧಾಮ ಪೀಠ ಸ್ಥಾಪಿಸಿದರು. ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲೇ ಅಭೂತಪೂರ್ವ ಸಾಧನೆ ಮಾಡಿ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.
ಶ್ರೀ ರಾಮಕೃಷ್ಣ ಆಶ್ರಮದ ಕನ್ನಡ ಪುಸ್ತಕ ಪ್ರಕಟಣೆ ವಿಭಾಗದ ಸ್ವಾಮಿ ಸರ್ವಜಯಾನಂದಜಿ ಮಾತನಾಡಿ, ಶಂಕರಚಾರ್ಯರು ತಾವು ಜೀವಿಸಿದ ಅಲ್ಪ ಕಾಲಾವಧಿಯಲ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ. ಅವರ ಅದ್ವೈತ ತತ್ವವನ್ನು ಜನಸಾಮಾನ್ಯರಿಗೆ ಸರಳ ರೂಪದಲ್ಲಿ ತಲುಪಿಸಬೇಕಿದೆ. ಆಚಾರ್ಯರ ಜೀವನ ಮಾರ್ಗದಲ್ಲಿ ನಾವುಗಳು ಸಾಗಬೇಕಿದೆ ಎಂದರು.
ವಿಮರ್ಶಕ ಗಾ.ನಾ.ಭಟ್ ಮಾತನಾಡಿ, ಶಂಕರಾಚಾರ್ಯರು ಹಿಂದು ಧರ್ಮದ ಪುನರುತ್ಪಾದಕರು. ಭಾವುಕತೆ ಮತ್ತು ವೈಚಾರಿಕತೆಗಳೆರಡು ಒಬ್ಬರ ಮನಸ್ಸಿನಲ್ಲಿ ಸಂಗಮಿಸಿತ್ತು ಎಂದರೆ ಅದು ಶಂಕರರ ಮನದಲ್ಲಿ ಮಾತ್ರ. ಅವರು ತಮ್ಮ 8ನೇ ವಯಸ್ಸಿನಲ್ಲೇ ನಾಲ್ಕು ವೇದ ಪಠಣ ಮಾಡಿದ್ದರು. ಗೋವಿಂದ ಭಗವತ್ಪಾದರ ಪರಮ ಶಿಷ್ಯರಾಗಿದ್ದರು. ಜ್ಞಾನ ಮಾರ್ಗ ತಲುಪಲು ಒಂದು ಏಣಿಯಾಗಿ ಮೂರ್ತಿ ಪೂಜೆಯನ್ನು ತಂದವರು ಶಂಕರಾಚಾರ್ಯರು ಎಂದು ಹೇಳಿದರು.
ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಇವರು ದೇಶದ ವಿವಿಧೆಡೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ ಅದ್ವೈತ ತತ್ವವನ್ನು ಪ್ರಚಾರ ಮಾಡಿದರು. 
ಹಲವಾರು ಮತಗಳಿಂದ ದಾಳಿಗೆ ಒಳಗಾದ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್, ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ವಿಪ್ರ ಸಮಾಜದ ಜಿ.ಟಿ ಪ್ರಕಾಶ್, ಶ್ರೀಕಂಠ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net