ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ಮುಖ್ಯ

ಬೆಟ್ಟದಪುರ ಸಮೀಪದ ದೊಡ್ಡಕಮರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಣಗಾಲು ಸರ್ಕಾರಿ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ರವಿ ಪ್ರಸನ್ನ, ಮಹದೇವ್,  ಕಲ್ಯಾಣಪ್ಪ, ಸಿ.ಕೃಷ್ಣೇಗೌಡ, ಗೋಪಿಕೃಷ್ಣ ಇತರರಿದ್ದರು.
ಬೆಟ್ಟದಪುರ ಸಮೀಪದ ದೊಡ್ಡಕಮರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಣಗಾಲು ಸರ್ಕಾರಿ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ರವಿ ಪ್ರಸನ್ನ, ಮಹದೇವ್, ಕಲ್ಯಾಣಪ್ಪ, ಸಿ.ಕೃಷ್ಣೇಗೌಡ, ಗೋಪಿಕೃಷ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ರವಿಪ್ರಸನ್ನ ಸಲಹೆ
  • ವಲಯ ಮಟ್ಟದ ಕ್ರೀಡಾಕೂಟ

ಬೆಟ್ಟದಪುರ: ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಮೂಲಕ ಶಿಸ್ತು, ಸಮಯಪಾಲನೆ, ತಂಡದ ಮನೋಭಾವ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾರನಹಳ್ಳಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದ್ದು, ಪಠ್ಯದ ಜತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಸಮಾನ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ಗೆಲುವು ಮುಖ್ಯವಾದರೂ, ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ ಮತ್ತು ಶಿಸ್ತಿಗೆ ಹೆಚ್ಚಿನ ಮಹತ್ವವಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗೆಲುವಿಗೆ ಪ್ರಯತ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಹಾರನಹಳ್ಳಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುಮಾರು 13 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಬೆಣಗಾಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಬೆಣಗಾಲು ಶಾಲೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪ್ರಥಮ ಸ್ಥಾನ, ಬಾಲಕರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ, ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ, ಬಾಲಕಿಯರ ಖೋ-ಖೋದಲ್ಲಿ ಪ್ರಥಮ ಹಾಗೂ ಬಾಲಕರ ಖೋ-ಖೋದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಇದಲ್ಲದೆ ಬಾಲಕ ಮತ್ತು ಬಾಲಕಿಯರ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಹೆಚ್ಚಿನ ಪ್ರಥಮ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಸ್ಪರ್ಧೆಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ ಬೆಣಗಾಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದು ವಲಯ ಮಟ್ಟದಲ್ಲಿ ಶಾಲೆಯ ಕ್ರೀಡಾ ಸಾಮರ್ಥ್ಯವನ್ನು ಮೆರೆದರು.
ದೊಡ್ಡಕಮರವಳ್ಳಿ ಶಾಲೆಯ ಮುಖ್ಯಶಿಕ್ಷಕ ಮಹದೇವ್, ಮುಖಂಡರಾದ ಕಲ್ಯಾಣಪ್ಪ, ಸಿ.ಕೃಷ್ಣೇಗೌಡ, ಗೋಪಿಕೃಷ್ಣ, ಲಕ್ಷ್ಮೀನಾರಾಯಣ, ರಾಜಶೇಖರ್, ಬೆಣಗಾಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ವಿ. ಸ್ವಾಮಿ, ಶಿಕ್ಷಕಿಯರಾದ ಜ್ಯೋತಿ, ಮಹಾದೇವಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net