ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಉದ್ಘಾಟಿಸಿದರು. ಡಾ.ಜೆ.ಶಶಿಧರ್‌ಪ್ರಸಾದ್, ಶಿವಸುಂದರ ಸತ್ಯೇಂದ್ರ, ಜಿ.ರಮೇಶ್, ಡಾ.ಎಂ.ವೆಂಕಟೇಶ್ ಇನ್ನಿತರರಿದ್ದರು.
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ
ಪ್ರತಿಭೆ ಗುರುತಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖ
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು ಗೆಲುವುಗಳಲ್ಲ.
ಮೈಸೂರು: ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನೆರವಾದರೆ, ದೈಹಿಕ ಆರೋಗ್ಯ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಹೇಳಿದರು.
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಗರದ ಜಯಲಕ್ಷ್ಮೀಪುರಂನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಸ್ಕೃತಿಕ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಕ್ರೀಡೆ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರಿಯಾಶೀಲತೆ ಹೊರಹಾಕಲು ಇವು ನೆರವಾಗುತ್ತವೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸತನ ನಿರ್ಮಿಸಬಹುದು. ವ್ಯಕ್ತಿತ್ವ ಬಲಪಡಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಅಧ್ಯಕ್ಷ, ವಿಶ್ರಾಂತ ಕುಲಪತಿ ಡಾ.ಜೆ.ಶಶಿಧರ್ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು ಗೆಲುವುಗಳಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಹೊರಹಾಕಲು ಇಂತಹ ಸಾಂಸ್ಕೃತಿಕ ವೇದಿಕೆಗಳು ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಹಿಂಜರಿಕೆಯ ಮನೋಭಾವವನ್ನು ಬಿಟ್ಟು ಬಿಡಬೇಕು. ತಮ್ಮಲ್ಲಿ ಅಡಗಿರುವ ಕಲೆ ಪ್ರದರ್ಶಿಸಲು ಮುಂದಾಗಬೇಕು ಎಂದರು. ಟ್ರಸ್ಟ್‌ನ ಕಾರ್ಯದರ್ಶಿ ಶಿವಸುಂದರ ಸತ್ಯೇಂದ್ರ, ಧರ್ಮದರ್ಶಿ ಜಿ.ರಮೇಶ್, ಪ್ರಾಂಶುಪಾಲ ಡಾ.ಎಂ.ವೆಂಕಟೇಶ್ ಉಪಸ್ಥಿತರಿದ್ದರು.
ಮನುಗನಹಳ್ಳಿಯ ಆರಾಧನಾ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯೇತರ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಮನುಗನಹಳ್ಳಿಯ ಆರಾಧನಾ ಪದವಿಪೂರ್ವ ಕಾಲೇಜು ಪಡೆದುಕೊಂಡಿತು. ಜಿಲ್ಲೆಯ 85 ಪಿಯುಸಿ ಕಾಲೇಜುಗಳಿಂದ ಅಂದಾಜು 350 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಕನ್ನಡ, ಇಂಗ್ಲಿಷ್, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಭಾವಗೀತೆ, ಜಾನಪದಗೀತೆ, ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆಗಳು, ಏಕಪಾತ್ರ ಅಭಿನಯ, ರಸಪ್ರಶ್ನೆ, ಜಾನಪದ ನೃತ್ಯ ಸ್ಪರ್ಧೆಗಳು ನಡೆದವು.