ಬೇಸಿಗೆಯಲ್ಲಿ ಅರಳುವ ನೀಲಿ ಪುಷ್ಪ

 ಚಪ್ಪರದಹಳ್ಳಿ-ಕುಳ್ಳಯ್ಯನ ಕೊಪ್ಪಲು ರಸ್ತೆಬದಿಯಲ್ಲಿ ನೀಲಿ ಬಣ್ಣದ ಹೂವುಗಳಿಂದ ಕೂಡಿರುವ ಜಕರಾಂಡಾ ಮರ.
ಚಪ್ಪರದಹಳ್ಳಿ-ಕುಳ್ಳಯ್ಯನ ಕೊಪ್ಪಲು ರಸ್ತೆಬದಿಯಲ್ಲಿ ನೀಲಿ ಬಣ್ಣದ ಹೂವುಗಳಿಂದ ಕೂಡಿರುವ ಜಕರಾಂಡಾ ಮರ.
Published on
ಸಿ.ಜಿ ಪುನೀತ್, ಚಪ್ಪರದಹಳ್ಳಿ: ಬೆಟ್ಟದಪುರ: ಬೇಸಿಗೆ ಆರಂಭವಾದರೆ ಸಾಕು ಗಿಡ ಮರಗಳು ಒಣಗುತ್ತಿದ್ದರೆ, ಇನ್ನೊಂದು ಕಡೆ ಎಲೆಗಳು ಉದುರುವುದು ಸಾಮಾನ್ಯವಾಗಿದೆ. ಆದರೆ, ಇಲ್ಲೊಂದು ಆಕಾಶದ ನೀಲಿ ಬಣ್ಣದಂತ ಪುಷ್ಪ ಬೇಸಿಗೆಯಲ್ಲಿ ಅರಳಿ ಎಲ್ಲರನ್ನು ಸ್ವಾಗತಿಸುವುದು ವಿಶೇಷವಾಗಿದೆ.
ನೀಲಿ ಜಕರಾಂಡಾ ಎಂದು ಕರೆಯುವ ಈ ವಿಶೇಷ ಹೂವಿನ ಮರ ಬೇಸಿಗೆಯಲ್ಲಿ ತನ್ನದೇ ಆಕರ್ಷಣೆ ಹೊಂದಿದೆ. ವಿದೇಶಗಳಲ್ಲಿ ಕಂಡು ಬರುವ ಈ ಮರವು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಲವಡೆ ಕಾಣಿಸಿಕೊಂಡಿದೆ. ಅದು ಹೆಚ್ಚಾಗಿ ರಸ್ತೆ ಬದಿಯಲ್ಲಿ ಬೆಳೆದಿರುವ ಹಿನ್ನಲೆ ವಾಹನ ಸವಾರರಿಗೆ, ಪಾದಚರಿಗಳಿಗೆ ಸುಂದರ ಮದ ನೀಡುತ್ತಿದೆ.
ಉಷ್ಣ ವಲಯದ ಮರ: ದಕ್ಷಿಣ ಅಮೆರಿಕಾಕ್ಕೆ ಸ್ಥಳೀಯವಾಗಿರುವ ಉಪ ಉಷ್ಣವಲಯದಲ್ಲಿ ಹೆಚ್ಚಾಗಿ ಕಂಡು ಬರುವ ಈ ಮರವು, ಅದರ ಆಕರ್ಷಕ ಮತ್ತು ದೀರ್ಘಕಾಲೀನ ನೇರಳೆ ಬಣ್ಣದ ಹೂವುಗಳಿಂದಾಗಿ ಬೇರೆಡೆ ವ್ಯಾಪಕವಾಗಿದೆ. ತೋಟಗಾರಿಕೆ ಮತ್ತು ದೈನಂದಿನ ಬಳಕೆಯಲ್ಲಿ ಇದು ಯಾವಾಗಲೂ ನೀಲಿ ಜಕರಾಂಡಾ ಎಂದರ್ಥ. ದಕ್ಷಿಣ ಆಫ್ರಿಕಾದ ರೇಡಿಯೋ ಕೇಂದ್ರ ಜಕರಾಂಡಾ ಎಫ್‌ಎಂ ಹೆಸರನ್ನು ಈ ಮರಕ್ಕೆ ನಾಮಕರಣ ಮಾಡಲಾಗಿದೆ. ಸುಮಾರು 60ಕ್ಕೂ ಹೆಚ್ಚು ಅಡಿ ಎತ್ತರಕ್ಕೆ ಬೆಳೆಯುವ ಈ ಮರವು, ತೆಳುವಾಗಿದ್ದು ಬೂದು ಹಾಗೂ ಕಂದು ಬಣ್ಣದ್ದಾಗಿದೆ. ಇದು ಚಿಕ್ಕದಾಗಿದ್ದಾಗ ನಯವಾಗಿರುತ್ತದೆ ಆದರೆ ಅಂತಿಮವಾಗಿ ಸೂಕ್ಷ್ಮವಾಗಿ ಚಿಪ್ಪುಗಳುಳ್ಳದ್ದಾಗುತ್ತದೆ. ವಸಂತ ಹಾಗೂ ಬೇಸಿಗೆಯ ಆರಂಭದಲ್ಲಿ ಚಿಗುರಲು ಆರಂಭಿಸುತ್ತವೆ ಎನ್ನಲಾಗಿದೆ.
ಪರೀಕ್ಷೆ ಸೂಚಿಸುವ ಮರ: ಶಾಲಾ, ಕಾಲೇಜು ಮಕ್ಕಳಿಗೆ ಪರೀಕ್ಷೆ ಬಂತು ಎನ್ನುವುದಕ್ಕೆ ಶಿಕ್ಷಣ ಇಲಾಖೆಯು ತನ್ನದೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟ ಮಾಡಲಿದೆ. ಆದರೆ, ವಿದೇಶದ ಬ್ರಿಸ್ಬೇನ್‌ನಲ್ಲಿರುವ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ಎಂದರೆ, ಜಕರಾಂಡಾಗಳು ಅರಳಿದ ಸಂದರ್ಭ ಪರೀಕ್ಷೆ ಬಂತು, ಅಧ್ಯಯನಕ್ಕೆ ಸಿದ್ಧರಾಗಿ ಎಂಬುದನ್ನು ಸೂಚಿಸುವ ಗಳಿಗೆಯಾಗಿದೆ. ತಾಪಮಾನದಲ್ಲಿ ಇದು ಬೆಳೆದರೂ, ಬೇಸಿಗೆಯಲ್ಲಿ ತಂಪು ನೀಡುವ ಮರವಾಗಿದೆ. ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರದ ಹಲವು ಉದ್ಯಾನವನ ಮುಖ್ಯರಸ್ತೆಗಳಲ್ಲಿ ಈ ಮರವನ್ನು ನಾವು ಹೆಚ್ಚಾಗಿ ಕಾಣಬಹುದಾಗಿದೆ. ಇನ್ನಾ ಇದರ ಕೃಷಿ ಸಂಬಂಧಿಸಿದಂತೆ ಜಕರಾಂಡಾವನ್ನು ಕಸಿ, ಕತ್ತರಿಸಿದ ಭಾಗಗಳು ಮತ್ತು ಬೀಜಗಳಿಂದ ಹರಡಬಹುದು. ಆದರೂ ಬೀಜಗಳಿಂದ ಬೆಳೆದ ಸಸ್ಯಗಳು ಅರಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಜಕರಂಡಾ ಚೆನ್ನಾಗಿ ಬರಿದುಹೋದ ಮಣ್ಣಿನಲ್ಲಿ ಬೆಳೆಯುತ್ತದೆ. ಬರ ಮತ್ತು ಅಲ್ಪಾವಧಿಯ ಹಿಮ ಮತ್ತು ಹಿಮಪಾತವನ್ನು ಸಹಿಸಿಕೊಳ್ಳಲಿದೆ.
ನಗರದ ಸರ್ಕಾರಿ ಉದ್ಯಾನವನಗಳು, ಖಾಸಗಿ ಲೇಔಟ್ ಗಳ ಪಾರ್ಕ್ ಗಳಲ್ಲಿ ಈ ಗಿಡವನ್ನು ನೆಟ್ಟು ಪೋಷಣೆ ಮಾಡಿದರೆ ಉದ್ಯಾನವನಕ್ಕೆ ಮತ್ತಷ್ಟು ಮೆರುಗು ಸಿಗಬಹುದು. ಇದರಿಂದ ನಿತ್ಯ ದೈನಂದಿನ ವಾಯುವಿಹಾರಕ್ಕೆ ಬರುವಂತಹ ಜನರಿಗೆ ಮತ್ತಷ್ಟು ಆಕರ್ಷಣೆ ಉಂಟಾಗುತ್ತದೆ.
ಅರೆಮಲೆನಾಡಿನಲ್ಲಿ ದರ್ಬಾರ್: ಮೈಸೂರು-ಮಡಿಕೇರಿ ಗಡಿಭಾಗದ ಪಿರಿಯಾಪಟ್ಟಣ ತಾಲೂಕು ಅರೆಮಲೆನಾಡು ಪ್ರದೇಶ ಎಂದೇ ಪ್ರಸಿದ್ಧವಾಗಿದೆ. ಖುಷಿ ಚಟುವಟಿಕೆಗಳಿಗೆ ಯೋಗ್ಯವಾದಂತಹ ಭೂಮಿಯನ್ನು ಹೊಂದಿರುವ ಈ ತಾಲೂಕಿನಲ್ಲಿ ತನ್ನದೇ ಆದ ಮಹತ್ವದ ಪ್ರಸಿದ್ಧ ಸ್ಥಳಗಳಿವೆ. ಅದರಲ್ಲಿ ವಿಶೇಷವಾಗಿ ಬೆಟ್ಟದಪುರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಜಕರಾಂಡಾಗಳ ಅಂತಹ ಹಲವು ಬಗೆಯ ಸಸ್ಯಗಳು ಗಿಡಮರಗಳನ್ನು ಕಾಣಬಹುದಾಗಿದೆ. ಬೇಸಿಗೆಯಲ್ಲಿ ಬೆಟ್ಟದಲ್ಲಿ ಗಿಡ, ಮರಗಳು ಒಣಗಿ ಹೋಗುತ್ತಿದ್ದರೆ. ಇನ್ನೊಂದು ಕಡೆ ಜಕರಾಂಡಾಗಳ, ಗುಲ್ ಮೊಹರ್, ಕಕ್ಕೆ ಹೂವು ಸೇರಿದಂತೆ ಹಲವು ಬಗೆಯ ಗಿಡಗಳು ಚಿಗುರುವ ಮೂಲಕ ತನ್ನ ಹೂಗಳನ್ನು ಅರಳಿಸುತ್ತಿವೆ. ಸಾಕಷ್ಟು ಔಷಧಿ ಗುಣಗಳನ್ನು ಹೊಂದಿರುವ ಗಿಡಮರಗಳನ್ನು ಈ ಭಾಗದಲ್ಲಿ ಕಾಣಬಹುದಾಗಿದೆ. ಸಸ್ಯಶಾಸ್ತ್ರ ಮೂಲಕ ಅಧ್ಯಯನಗಳು ನಡೆದರೆ ಪಿರಿಯಾಪಟ್ಟಣ ತಾಲೂಕು ಮತ್ತಷ್ಟು ಪ್ರಸಿದ್ಧಿ ಆಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net