ಶ್ರೀರಾಮಪುರದ ಉತ್ತರಾದಿ ಮಠದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ 30 ಕೆವಿ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ. ಟಿ.ಆರ್. ಅರುಣ್ ಚಾಲನೆ ನೀಡಿದರು.ಪಂಡಿತ ಹೇಮಂತ ಆಚಾರ್ಯ ಗುಡಿ, ಬದರಿ ಪ್ರಸಾದ್, ಗಣೇಶ ಭಟ್, ಗೋವರ್ಧನ, ಎ.ಎನ್. ರಮೇಶ್ ಹಾಜರಿದ್ದರು.
ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ 30 ಕೆವಿ ಸಾಮರ್ಥ್ಯದ 46 ಪ್ಯಾನಲ್ ಅಳವಡಿಕೆ
ಕರ್ನಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ 10 ಲಕ್ಷ ರೂ. ದೇಣಿಗೆ
ಮೈಸೂರು: ಪರ್ಯಾಯ ಇಂಧನ ಮೂಲಗಳತ್ತ ಗಮನ ಹರಿಸುವುದು ಇಂದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ. ಟಿ.ಆರ್. ಅರುಣ್ ಹೇಳಿದರು.
ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀರಾಮಪುರ ಶಾಖೆಯಾದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸೌರ ಶಕ್ತಿ ವಿದ್ಯುತ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ಕೇಂದ್ರಗಳು ಸಂಪ್ರದಾಯ, ಭಕ್ತಿ ಮತ್ತು ಶ್ರದ್ಧೆಯನ್ನು ಜಾಗೃತಗೊಳಿಸುವುದರೊಂದಿಗೆ ಪರಿಸರಾತ್ಮಕ ಕಾಳಜಿಯನ್ನೂ ಮೂಡಿಸಬೇಕು. ಈ ನಿಟ್ಟಿನಲ್ಲಿ ವೆಂಕಟೇಶ್ವರ ಧ್ಯಾನ ಕೇಂದ್ರವು 30 ಕೆವಿ ಸಾಮರ್ಥ್ಯದ 46 ಪ್ಯಾನಲ್ ಸಹಿತ ಸೌರ ಶಕ್ತಿ ಘಟಕವನ್ನು ಅಳವಡಿಸಿಕೊಂಡು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾದರಿ ಎಂದರು.
ಸೌರ ವಿದ್ಯುತ್ ಘಟಕವು ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ಇಂಧನ ಮೂಲ. ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿದ್ದು. ಧ್ಯಾನ ಕೇಂದ್ರವೂ ಈ ನಿಟ್ಟಿನಲ್ಲಿ ಪರಿಸರ ಕಾಳಜಿಯನ್ನು ಕಾರ್ಯರೂಪಕ್ಕೆ ತಂದಿರುವುದು ಶ್ಲಾಘನೀಯ ಎಂದರು.
ಬ್ಯಾಂಕ್ ದೇಣಿಗೆ:
ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯ ಪ್ರಬಂಧಕ ಬದರಿ ಪ್ರಸಾದ್ ಮಾತನಾಡಿ, ಘಟಕ ಸ್ಥಾಪನೆಗೆ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ 10 ಲಕ್ಷ ರೂ. ದೇಣಿಗೆ ನೀಡಿದೆ. ಶತಮಾನ ಪೂರ್ಣಗೊಳಿಸಿದ ಬ್ಯಾಂಕ್ ಆರ್ಥಿಕ ವ್ಯವಹಾರದದೊಂದಿಗೆ ಪರಿಸರಾತ್ಮಕ ಸೇವಾ ಕಾರ್ಯಗಳಿಗೂ ಬೆಂಬಲ ನೀಡುತ್ತಿದೆ ಎಂದರು.
ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ:
ಧ್ಯಾನ ಕೇಂದ್ರದ ವ್ಯವಸ್ಥಾಪಕ ಪಂಡಿತ ಹೇಮಂತ ಆಚಾರ್ಯ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ ಮತ್ತು ಆದೇಶದಂತೆ ಧ್ಯಾನ ಕೇಂದ್ರವು ದಶಕಗಳಿಂದ ಧರ್ಮ ಜಾಗೃತಿಗಾಗಿ ಹಲವು ಚಟುವಟಿಕೆ ನಡೆಸುತ್ತಿದೆ. ಸೌರ ವಿದ್ಯುತ್ ಘಟಕ ಸ್ಥಾಪನೆ ಒಂದು ಹೊಸ ಹೆಜ್ಜೆ ಎಂದರು.
ಬ್ಯಾಂಕಿನ ವಿವೇಕಾನಂದನಗರ ಶಾಖಾ ಅಧಿಕಾರಿ ಗಣೇಶ ಭಟ್, ನಿವೃತ್ತ ಹಿರಿಯ ವ್ಯವಸ್ಥಾಪಕ ಗೋವರ್ಧನ, ಮಠದ ಹಿರಿಯ ಕಾರ್ಯಕರ್ತ ಎ.ಎನ್. ರಮೇಶ್ ಇತರರು ಹಾಜರಿದ್ದರು.