ಹುಣಸೂರು ನಗರದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯಶಸ್ವಿ ಎಸ್.ಸೋಮಶೇಖರ್, ಶಾಮಣ್ಣ ಧರ್ಮಾಪುರ, ಲೂಯಿಸ್ ಪರೇರಾ ಇತರರಿದ್ದರು.
ಹುಣಸೂರು : ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡುವಂತಹ ಯೋಜನೆಗಳ ಜಾರಿಯಲ್ಲಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಪದಗ್ರಹಣಾಧಿಕಾರಿ ಹಾಗೂ 2027-28ನೇ ಸಾಲಿನ ನಿಯೋಜಿತ ಜಿಲ್ಲಾ ಪ್ರಾಂತಪಾಲ (ಜಿ.3181) ರೊ. ಎಂಪಿಎಚ್‌ಎಫ್ ಯಶಸ್ವಿ ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.
ಮಂಗಳವಾರ ಆಯೋಜಿಸಿದ್ದ ಹುಣಸೂರು ರೋಟರಿ ಕ್ಲಬ್‌ನ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಸಮಾಜದ ಏಳಿಗೆಗೆ ಎಲ್ಲರೂ ಮೆಚ್ಚುವಂತಹ ಪರಿಣಾಮಕಾರಿ ಕಾರ್ಯಗಳನ್ನೇ ಕೈಗೊಂಡಿದೆ. ಪೋಲಿಯೋ ನಿರ್ಮೂಲನೆ, ಸಾಕ್ಷರತೆ, ಮಹಿಳಾ ಸಬಲೀಕರಣ, ನಾಗರಿಕ ಪ್ರಜ್ಞೆ ಮೂಡಿಸುವ ಮುಂತಾದ ಕಾರ್ಯಗಳನ್ನು ರೋಟರಿ ಯೋಜನಾಬದ್ಧ ಮತ್ತು ಪಾರದರ್ಶಕವಾಗಿ ನಡೆಸಿದೆ ಎಂದರು.
ಈ ಬಾರಿಯೂ ರೋಟರಿಯಿಂದ ಮಹಿಳಾ ಸಬಲೀಕರಣ, ಆರೋಗ್ಯ, ತಾಯಿ-ಮಗು ಆರೋಗ್ಯ ರಕ್ಷಣೆ, ಶಿಕ್ಷಣ, ಸಂಚಾರ ನಿಯಮ ಅರಿವು, ಪರಿಸರ ಸಂರಕ್ಷಣೆ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ನಿಸ್ವಾರ್ಥ ಸೇವೆಯೇ ರೋಟರಿಯ ಧ್ಯೇಯೋದ್ದೇಶವಾಗಿದೆ. ಸಮುದಾಯದ ಸಹಕಾರದೊಂದಿಗೆ ಈ ಬಾರಿಯ ಜಿಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಎಲ್ಲ ರೋಟರಿ ಸದಸ್ಯರು ಶ್ರಮಿಸಲಿದ್ದಾರೆ ಎಂದರು.
ನೂತನ ಅಧ್ಯಕ್ಷ ಪಿಎಚ್‌ಎಫ್ ಶಾಮಣ್ಣ ಧರ್ಮಾಪುರ ಮಾತನಾಡಿ, ಹುಣಸೂರು ರೋಟರಿ ತನ್ನದೇ ಆದ ವಿಶೇಷತೆ ಒಳಗೊಂಡಿದೆ. 60 ವರ್ಷದ ಹೊಸ್ತಿಲಲ್ಲಿರುವ ಹುಣಸೂರು ರೋಟರಿಯ ಎಲ್ಲ ಹಿರಿಯ ಸದಸ್ಯರ ಸಲಹೆ ಸೂಚನೆಗಳೊಂದಿಗೆ ನನ್ನ ತಂಡ ಕಾರ್ಯ ನಿರ್ವಹಿಸಲಿದೆ. ಜಿಲ್ಲಾ ಯೋಜನೆಗಳಡಿ ಮಹಿಳಾ ಸಬಲೀಕರಣ, ಹಿರಿಯ ನಾಗರಿಕರ ಸುರಕ್ಷತೆ, ಸ್ತ್ರೀ ಸುರಕ್ಷಾ, ಅರಣ್ಯ ಮಿತ್ರ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಸಹಾಯಕ ಪ್ರಾಂತಪಾಲ ರಾಘವೇಂದ್ರ, ವಲಯ ಸೇನಾನಿ ಕೆ.ಪಿ.ಪ್ರಸನ್ನ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗಿ ಡಾ.ನಿವೇದಿತಾ, ಡಾ.ವಿಶ್ವಾಸ್, ಸ್ಮಿತಾ ದಯಾನಂದ್, ಮನುರಾಜ್ ಮತ್ತು ಶ್ರವಣ್‌ಕುಮಾರ್ ಸೇರ್ಪಡೆಗೊಂಡರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯದರ್ಶಿ ಲೂಯಿಸ್ ಪೆರೇರಾ, ನಿಕಟ ಪೂರ್ವ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ರೊ.ಮಂಜುನಾಥ್, ರೊ.ಚನ್ನಕೇಶವ ಹಾಗೂ ಕೆ.ಆರ.ನಗರ, ಪಿರಿಯಾಪಟ್ಟಣ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ವಿವಿಧ ತಾಲೂಕಿನ ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.