ಹುಣಸೂರು ತಾಲೂಕು ಪಶುಪಾಲನ ಮತ್ತು ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪರಿಗೆ ಕರವೇ ವತಿಯಿಂದ ಮನವಿ ಸಲ್ಲಿಸಲಾಯಿತು. ಪುರುಷೋತ್ತಮ್, ಬಲರಾಂ, ಮುನ್ನಾ, ಗಿರೀಶ್, ರಮೇಶ್ ಇತರರಿದ್ದರು.
ಹುಣಸೂರು: ನಗರದ ಕಸಾಯಿಖಾನೆಗಳಲ್ಲಿ ಅನಾರೋಗ್ಯ ಪೀಡಿತ ಕುರಿಗಳನ್ನು ಕತ್ತರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಈ ಕೂಡಲೇ ತಡೆಹಿಡಿದು ಅಂತಹವರ ಮೇಲೆ ಕ್ರಮಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಜಿಲ್ಲಾಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
ಶುಕ್ರವಾರ ಈ ಕುರಿತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಹುಣಸೂರಿನ ಕೆಲ ಕಸಾಯಿಖಾನೆಗಳಲ್ಲಿ ಅನಾರೋಗ್ಯ ಪೀಡಿತ ಕುರಿಮರಿಗಳನ್ನು ಯಾವುದೇ ಆರೋಗ್ಯ ತಪಾಸಣೆಗೆ ಒಳಪಡಿಸದೆ ಬಳಸಿ ಮಾರಾಟ ಮಾಡುತಿರುವುದು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದು ಪ್ರತ್ಯಕ್ಷವಾಗಿ ಕಂಡವರು ಮಾರಾಟಗಾರರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕಾನೂನಾತ್ಮಕವಾಗಿ ತಿನ್ನುವ ಆಹಾರಕ್ಕಾಗಿ ಕಸಾಯಿಖಾನೆಗೆ ಸಾಗಿಸುವ ಯಾವುದೇ ಪ್ರಾಣಿಯ ವಧೆಯನ್ನು ಅದರ ಆರೋಗ್ಯ ಪರೀಕ್ಷಾ ನಂತರ ಸಂಬಂಧಪಟ್ಟ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ದೃಢಪಡಿಸಬೇಕು. ಈ ಕಾರ್ಯವು ನಗರಸಭೆಯ ಆರೋಗ್ಯ ನಿರೀಕ್ಷಕರ ಸಮ್ಮುಖದಲ್ಲಿ ಜರುಗಬೇಕು. ನಂತರ ಇಬ್ಬರು ಅಧಿಕಾರಿಗಳು ಕುರಿಯ ಆರೋಗ್ಯದ ಕುರಿತು ವರದಿ ಸಲ್ಲಿಸಿ ಸಹಿ ಹಾಕಬೇಕು. ಈ ಎಲ್ಲ ನೀತಿ-ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು.
ಸಂಬಂಧಪಟ್ಟಂತಹ ಕಸಾಯಿಖಾನೆಯವರಾಗಲಿ ಅಥವಾ ಪಶುವೈದ್ಯಾಧಿಕಾರಿ ಇಲಾಖೆಯ ಯಾರೊಬ್ಬರಾಗಲಿ ನಿಯಮ ಪಾಲಿಸುವತ್ತ ಗಮನ ಹರಿಸುತ್ತಿಲ್ಲ. ಅನಾರೋಗ್ಯ ಪೀಡಿತವಾಗಿ ಅಥವಾ ಇನ್ನೇನು ಸಾಯುವ ಸ್ಥಿತಿಯಲ್ಲಿರುವಂತಹ ಕುರಿಗಳನ್ನು ಕಡಿಮೆ ದರದಲ್ಲಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡಿ ಹಣ ಗಳಿಕೆಯ ದುರುದ್ದೇಶದಿಂದ ಸಾರ್ವಜನಿಕರಿಗೆ ರೋಗ-ರುಜಿನಗಳನ್ನು ತಂದಿಕ್ಕುವ ಕಾರ್ಯ ನಡೆದಿರುವುದು ನಿಜಕ್ಕೂ ಖಂಡನೀಯ, ಪಶುಪಾಲನಾ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕರ್ತವ್ಯ ಲೋಪವಾದರೆ ಸಂಬಂಧಪಟ್ಟ ಕಚೇರಿಗಳ ಮುಂದೆ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಮನವಿ ಸಲ್ಲಿಕೆ ವೇಳೆ ಕರವೇ ತಾಲೂಕು ಉಪಾಧ್ಯಕ್ಷ ಬಲರಾಮ್, ನಗರಾಧ್ಯಕ್ಷ ಮುನ್ನಾ, ಪ್ರಧಾನ ಕಾರ್ಯದರ್ಶಿ ಗಿರೀಶ್, ಖಜಾಂಜಿ ರಮೇಶ್, ಸಂಜೀವ, ಝಬಿ, ಕಾರ್ಮಿಕ ಘಟಕದ ಅಧ್ಯಕ್ಷ ರಫಿ ಅಹ್ಮದ್, ನಾಗರಾಜ್ ಚೆನ್ನಸೋಗೆ, ಶಿವರಾಮ್, ರಾಜೇಗೌಡ ಇದ್ದರು.