ವಿದ್ಯಾರ್ಥಿಗಳಲ್ಲಿ ಕೌಶಲಯುತ ಜ್ಞಾನ ಅಗತ್ಯ: ಪ್ರೊ.ಎನ್.ಕೆ.ಲೋಕನಾಥ್

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ದೀಕ್ಷಾರಂಭ’ ಕಾರ್ಯಕ್ರಮಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಚಾಲನೆ ನೀಡಿದರು. ಪ್ರೊ. ಬಿ.ವಿ. ಸಾಂಬಶಿವಯ್ಯ, ಡಾ. ಎಂ. ಪ್ರಭು, ಡಾ. ಎನ್. ರಾಜೇಂದ್ರಪ್ರಸಾದ್ ಇದ್ದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ದೀಕ್ಷಾರಂಭ’ ಕಾರ್ಯಕ್ರಮಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಚಾಲನೆ ನೀಡಿದರು. ಪ್ರೊ. ಬಿ.ವಿ. ಸಾಂಬಶಿವಯ್ಯ, ಡಾ. ಎಂ. ಪ್ರಭು, ಡಾ. ಎನ್. ರಾಜೇಂದ್ರಪ್ರಸಾದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನದ ಜತೆಗೆ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು
  • ಉನ್ನತ ಶಿಕ್ಷಣದಲ್ಲಿ ಪಠ್ಯದ ಕಲಿಕೆಯ ಜತೆಗೆ ಆಧುನಿಕತೆಯ ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು
ಮೈಸೂರು:ಉದ್ಯೋಗಕ್ಕೆ ಅಂಕಪಟ್ಟಿ ಅಷ್ಟೇ ಮುಖ್ಯವಲ್ಲ, ಅದರೊಂದಿಗೆ ವಿದ್ಯಾರ್ಥಿಗಳಲ್ಲಿ ಕೌಶಲಯುತ ಜ್ಞಾನ ಅತ್ಯಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿಯಿಂದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ‘ದೀಕ್ಷಾರಂಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನದ ಜತೆಗೆ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು. ಕಲಿಯುವ ಸಾಮರ್ಥ್ಯ, ತಾಂತ್ರಿಕ ಕೌಶಲತೆ, ಪ್ರಾಮಾಣಿಕ ಓದು, ಆತ್ಮವಿಶ್ವಾಸ, ಶಿಸ್ತುಬದ್ಧವಾದ ದಿನಚರಿ, ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.
ಉನ್ನತ ಶಿಕ್ಷಣದಲ್ಲಿ ಪಠ್ಯದ ಕಲಿಕೆಯ ಜತೆಗೆ ಆಧುನಿಕತೆಯ ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಅಂಕದ ಜತೆಗೆ ವಿವಿಧ ಕೌಶಲವನ್ನು ರೂಢಿಸಿಕೊಂಡವರು ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ದೂರದೃಷ್ಟಿತ್ವದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿವೆ. ಆಧುನಿಕ ಸಂದರ್ಭದ ಹೊಸ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಲು ಪೂರಕವಾಗುವಂತೆ ಶಿಕ್ಷಣದ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಅನುಸರಿಸುತ್ತಿವೆ. ವಿದ್ಯಾರ್ಥಿಗಳು ನಿರಂತರವಾದ ಅಧ್ಯಯನ ಹೊಸ ಪುಸ್ತಕಗಳ ಓದು, ಉತ್ತಮ ಸ್ನೇಹ ವಲಯ ಸಮಯದ ಸರಿಯಾದ ಸದುಪಯೋಗ ವಿದ್ಯಾರ್ಥಿಗಳಿಗೆ ಅಗತ್ಯ. ಮೈಸೂರು ವಿಶ್ವವಿದ್ಯಾನಿಲಯ ದೇಶದಲ್ಲಿಯೇ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಈ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಈ ಕಾಲೇಜು ಕೂಡ ನಾಡಿಗೆ ಅನೇಕ ಸಾಧಕರನ್ನು ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶಿಕ್ಷಣದ ಮೂಲಕ ಮಾನವನ ಅಭಿವೃದ್ಧಿಗಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿವೆ. ಉನ್ನತ ಶಿಕ್ಷಣದಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಉನ್ನತ ಶಿಕ್ಷಣಕ್ಕೆ ದಾಖಲಾಗುವ ಹೊಸ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಈ ದೀಕ್ಷಾರಂಭ ಕಾರ್ಯಕ್ರಮದ ಮೂಲಕ ಶಿಕ್ಷಣದ ಗುರಿ ಉದ್ದೇಶಗಳನ್ನು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಗಳನ್ನು ತಿಳಿಸುವ ಉದ್ದೇಶವನ್ನು ಒಳಗೊಂಡಿವೆೆ ಎಂದರು.
ವಿದ್ಯಾರ್ಥಿಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು, ಅವರ ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಬೆಳೆಸಲು, ಸಾಮಾಜಿಕ ಪ್ರಸ್ತುತತೆಯ ವಿವಿಧ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸಲು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಪ್ರಾಂಶುಪಾಲ ಡಾ.ಎಂ. ಪ್ರಭು, ಐಕ್ಯುಎಸಿ ಸಂಚಾಲಕ ಡಾ. ಎನ್.ರಾಜೇಂದ್ರಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net