ಮೈಸೂರು: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮಂಗಳವಾರದಿಂದ ಅಧಿಕೃತವಾಗಿ ಆರಂಭವಾಗಲಿದೆ.
ಜೂ.30ರಿಂದ ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಬಿಎಲ್‌ಒಗಳು ಎಸ್‌ಐಆರ್ ಅರ್ಜಿ ನೀಡಲಿದ್ದು, ಮತದಾರರು ಅರ್ಜಿ ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಈ ಅವಧಿಯಲ್ಲಿ ನಡೆಯಲಿದೆ.
ಚುನಾವಣಾ ಆಯೋಗದ ಸೂಚನೆಯಂತೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಸಲ್ಲಿಸುವುದು ಮುಖ್ಯವಾಗಿದೆ. ಅರ್ಜಿ ಸಲ್ಲಿಸದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯದಿರುವ ಸಾಧ್ಯತೆ ಇರುವುದರಿಂದ, ಮತದಾನದ ಹಕ್ಕಿನ ಮೇಲೂ ಪರಿಣಾಮ ಬೀಳಲಿದೆ.
ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ವರುಣ ಮತ್ತು ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ 27,99,955 ಮತದಾರರಿದ್ದು, ಇವರ ಮ್ಯಾಪಿಂಗ್ ಸಹ ಪೂರ್ಣಗೊಂಡಿದೆ.
ಭಾರತ ದೇಶದ ಪ್ರಜೆಯಾಗಿರುವ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಒಂದು ಸ್ಥಳದಲ್ಲಿ ಮಾತ್ರ ಮತದಾನದ ಹಕ್ಕು ಪಡೆದಿರಬೇಕು ಎಂಬ ಸದುದ್ದೇಶದಿಂದ ಎಸ್‌ಐಆರ್ ಪ್ರಕ್ರಿಯೆ ನಡೆಲಾಗುತ್ತಿದೆ.
ಸಾರ್ವಜನಿಕರು ತಮಗೆ ನೀಡಲಾಗುವ ಎನ್ಯೂಮರೇಷನ್ ಅರ್ಜಿಯಲ್ಲಿ ನಿಖರ ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ನೀಡುವುದು. ಮರಣ ಹೊಂದಿರುವವರು, ವಲಸೆ ಹೋಗಿರುವವರ ವಿವರ ಭರ್ತಿ ಮಾಡಿ ನೀಡುವುದು ಹಾಗೂ ಇನ್ನಿತರ ತಪ್ಪು ಮಾಹಿತಿ ಒದಗಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಎನೂಮರೇಷನ್ ಅರ್ಜಿಯನ್ನು ತಲುಪಿಸಿ, ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮತದಾರರು ಎಚ್ಚರಿಕೆ ವಹಿಸಬೇಕಿದೆ.
ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ನೆಲೆಸಿರುವವರ ಹೆಸರು ಹಳೇ ವೋಟರ್ ಲಿಸ್ಟ್‌ನಲ್ಲಿ ಇಲ್ಲದಿದ್ದರೆ, ಅವರಿಗೆ ಫ್ಯಾಮಿಲಿ ಲಿಂಕೇಜ್ ಸಿಗುವುದಿಲ್ಲ.
ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೆ, ಆ ಮಾಹಿತಿ ಅನುಸಾರ ಹೆಸರು ಸೇರ್ಪಡೆ ಮಾಡಬಹುದು. ಮ್ಯಾಪಿಂಗ್ ಆಗದೆ ಇರುವವರು ಎನ್ಯೂಮರೇಟರ್ ಅರ್ಜಿಯೊಂದಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲಾತಿ ಸಲ್ಲಿಸಿದರೆ ಮತಪಟ್ಟಿಗೆ ಅವರ ಹೆಸರು ಸೇರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಪರಿಷ್ಕರಣೆ ವೇಳಾಪಟ್ಟಿ
ಜೂನ್ 30ರಿಂದ ಜುಲೈ 29: ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಆಗಸ್ಟ್ 5: ಮತದಾರರ ಕರಡು ಪಟ್ಟಿ ಪ್ರಕಟಣೆ
ಆಗಸ್ಟ್ 5ರಿಂದ ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಕೆ
ಆಗಸ್ಟ್ 5ರಿಂದ ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ