ಎಸ್‌ಐಆರ್ ಎರಡನೇ ಸ್ವಾತಂತ್ರೃ ಸಂಗ್ರಾಮವಿದ್ದಂತೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್

ಎಸ್‌ಐಆರ್ ಕುರಿತು ನಗರದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಜಾಗೃತಿ ಸಮಾವೇಶವನ್ನು  ಸಿದ್ದರಾಮಯ್ಯ ಉದ್ಘಾಟಿಸಿದರು. ಬಿ.ಕೆ.ಹರಿಪ್ರಸಾದ್, ಡಾ.ಯತೀಂದ್ರ ಸಿದ್ದರಾಮಯ್ಯ ಚಂದ್ರಶೇಖರ್, ತನ್ವೀರ್‌ಸೇಠ್,ಡಾ. ಎಚ್.ಸಿ. ಮಹದೇವಪ್ಪ, ಪುಷ್ಪಾ ಅಮರನಾಥ್, ಆರ್.ನರೇಂದ್ರ, ಪುಟ್ಟರಂಗಶೆಟ್ಟಿ, ಆರ್.ಮೂರ್ತಿ, ಬಿ.ಜೆ. ವಿಜಯಕುಮಾರ್ ಇತರರು ಇದ್ದರು.
ಎಸ್‌ಐಆರ್ ಕುರಿತು ನಗರದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಜಾಗೃತಿ ಸಮಾವೇಶವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಬಿ.ಕೆ.ಹರಿಪ್ರಸಾದ್, ಡಾ.ಯತೀಂದ್ರ ಸಿದ್ದರಾಮಯ್ಯ ಚಂದ್ರಶೇಖರ್, ತನ್ವೀರ್‌ಸೇಠ್,ಡಾ. ಎಚ್.ಸಿ. ಮಹದೇವಪ್ಪ, ಪುಷ್ಪಾ ಅಮರನಾಥ್, ಆರ್.ನರೇಂದ್ರ, ಪುಟ್ಟರಂಗಶೆಟ್ಟಿ, ಆರ್.ಮೂರ್ತಿ, ಬಿ.ಜೆ. ವಿಜಯಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಹೋರಾಡುವ ಮೂಲಕ ಎರಡನೇ ಸ್ವಾತಂತ್ರೃ ಚಳವಳಿ ಮಾಡಬೇಕಿದೆ
  • ಅಲ್ಪಸಂಖ್ಯಾತ, ದಲಿತ, ಶೋಷಿತರನ್ನು ಮತಪಟ್ಟಿಯಿಂದ ಹೊರಗಿಡುವ ಕೆಲಸ ಅಗುತ್ತಿದೆ
ಮೈಸೂರು:ಮತಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ನಡೆಯುತ್ತಿರುವ ಎರಡನೇ ಸ್ವಾತಂತ್ರೃ ಸಂಗ್ರಾಮವಾಗಿದ್ದು, ಇದರಲ್ಲಿ ಹೋರಾಟ ಮಾಡಲು ನಮ್ಮ ಕಾರ್ಯಕರ್ತರು ಸಜ್ಜುಗೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮತಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ನಗರದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಜಿಲ್ಲೆಗಳ ಕಾಂಗ್ರೆಸ್ ವಿವಿಧ ವಿಭಾಗದ ಅಧ್ಯಕ್ಷರು, ಬಿಎಲ್‌ಒಗಳ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತ್ತು. ಆದರೆ ಈಗ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಹೋರಾಡುವ ಮೂಲಕ ಎರಡನೇ ಸ್ವಾತಂತ್ರೃ ಚಳವಳಿ ಮಾಡಬೇಕಿದೆ ಎಂದರು.
ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅಲ್ಪಸಂಖ್ಯಾತ, ದಲಿತ, ಶೋಷಿತರನ್ನು ಮತಪಟ್ಟಿಯಿಂದ ಹೊರಗಿಡುವ ಕೆಲಸ ಅಗುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಹೇಳಿದರು.
ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಸತ್ತವರನ್ನು ಕೈಬಿಟ್ಟು, ಹೊಸ ಮತದಾರರನ್ನು ಸೇರ್ಪಡೆ ಮಾಡಬೇಕಾಗಿರುವುದು ಕರ್ತವ್ಯ. ಆದರೆ ನಮ್ಮ ಮತದಾರರು ಅಲ್ಲ ಎನ್ನುವ ಕಾರಣಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ಅರ್ಹ ಮತದಾರರನ್ನು ಕೈ ಬಿಡುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದರು.
ಎಸ್‌ಐಆರ್ ವಿರುದ್ಧ ರಾಹುಲ್‌ಗಾಂಧಿ ಅವರು ಪ್ರಥಮ ಬಾರಿಗೆ ಧ್ವನಿ ಎತ್ತಿದಾಗ ಟೀಕೆ ಮಾಡಿದರು. ಆದರೆ ದೇಶದಲ್ಲಿ ಈಗ ನಡೆದ ಚುನಾವಣೆ ಮೂಲಕ ಬಿಜೆಪಿ ಏನು ಮಾಡಲು ಹೊರಟಿದೆ ಎನ್ನುವುದು ಸ್ಪಷ್ಟವಾಗಿದೆ. ವೋಟ್ ಜೋರ್‌ನಿಂದ ಗೆಲ್ಲುತ್ತಾ ಬಂದಿರುವ ಬಿಜೆಪಿ, ಈಗ ಮತದಾರರನ್ನು ಪಟ್ಟಿಯಿಂದ ಕೈ ಬಿಡುವ ಮೂಲಕ ಪ್ರಜಾಪ್ರಭುತ್ವ, ಸಂವಿಧಾನವನ್ನು ಚೋರ್ ಮಾಡುತ್ತಿದೆ ಎಂದು ಟೀಕಿಸಿದರು.
ಅದಕ್ಕೆ ಅವಕಾಶ ನೀಡದಂತೆ ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಎಸ್‌ಐಆರ್ ಕಾರ್ಯ ನಡೆಯುವ ಜೂ.30 ರಿಂದ ಜುಲೈ 29 ರವರೆಗೆ ಒಂದು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಅರ್ಹರು ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳಬೇಕು ಎಂದರು.
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.
ಮತದಾರರಿಗೆ ಆಯೋಗ ಕೇಳಿರುವ 11 ದಾಖಲೆಗಳು ಸುಲಭವಾಗಿ ಸಿಗಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಗ್ರಾಮ ಪಂಚಾಯಿತಿ ಹಾಗೂ ನಗರ ಪಾಲಿಕೆ ಮಟ್ಟದಲ್ಲಿ ದಾಖಲೆಗಳು ಸಿಗಲಿವೆ. ಈ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ತನ್ವೀರ್‌ಸೇಠ್, ಉಪಾಧ್ಯಕ್ಷ ಹಾಗೂ ಪಕ್ಷದ ಎಸ್‌ಐಆರ್ ಪರಿಷ್ಕರಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ. ವೆಂಕಟೇಶ್, ಕೋಟೆ ಎಂ.ಶಿವಣ್ಣ, ರಾಣಿ ಸತೀಶ್, ಸಂಸದರಾದ ಶ್ರೇಯಸ್ಸ್ ಪಟೀಲ್, ಸುನೀಲ್‌ಬೋಸ್, ಶಾಸಕರಾದ ಶಿವಲಿಂಗೇಗೌಡ, ಕೆ.ಹರೀಶ್‌ಗೌಡ, ರವಿಶಂಕರ್, ಪೊನ್ನಣ್ಣ, ಗಣೇಶ್‌ಪ್ರಸಾದ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಆರ್.ನರೇಂದ್ರ, ಪಕ್ಷದ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಇತರರು ಇದ್ದರು.
ಪೌರತ್ವ ಹೋಗಬಹುದು
ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗ ಬಿಜೆಪಿಗೆ ಅನುಕೂಲ ಅಗುವಂತೆ ಕಾರ್ಯ ನಿರ್ವಹಿಸುತ್ತಿದೆ. ಪಕ್ಷದ ಕಾರ್ಯಕರ್ತರು ಮತದಾರರ ಪರ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಮತದಾನದ ಹಕ್ಕು ಕಸಿಯಲು ಬಿಡಬಾರದು. ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸರ್ಕಾರದ ಸವಲತ್ತು, ಪೌರತ್ವವೂ ಹೋಗಬಹುದು.
ವಿ.ಆರ್.ಸುದರ್ಶನ್
ಉಪಾಧ್ಯಕ್ಷ, ಕೆಪಿಸಿಸಿ

ಮಾರ್ಗದರ್ಶನ ಪಡೆಯಬೇಕು
ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಮುಖಂಡರಿಂದ ಮಾರ್ಗದರ್ಶನ ಪಡೆಯಬೇಕು. ಅರ್ಹರ ಹೆಸರು ಇರುವಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಮಾರ್ಗದರ್ಶನ ಪಡೆದು ಮುಂದೆಯೂ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು.
ಜಿ.ಸಿ.ಚಂದ್ರಶೇಖರ್
ಕಾರ್ಯಾಧ್ಯಕ್ಷ, ಕೆಪಿಸಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net