ಹನಗೋಡಿನಲ್ಲಿ ಶಾಲಾ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅರಿವು ಮೂಡಿಸಿದರು.
ಹನಗೋಡು: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹನಗೋಡು ಸರ್ಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2026ರ ಅಂಗವಾಗಿ ಬುಧವಾರ ಜಾಗೃತಿ ಜಾಥಾ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.
ಶಾಲಾ ಬ್ಯಾಂಡ್‌ಸೆಟ್ ತಂಡದ ನೇತೃತ್ವದಲ್ಲಿ ಶಾಲಾ ಆವರಣದಿಂದ ಆರಂಭವಾದ ಜಾಥಾದಲ್ಲಿ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅರಿವು ಮೂಡಿಸಿದರು.
ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ನಿಮ್ಮ ಮತ ನಿಮ್ಮ ಭವಿಷ್ಯ, ನನ್ನ ಮತ ನನ್ನ ಹಕ್ಕು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿರಿ, ಮತ ಪರಿಷ್ಕರಣೆಯಲ್ಲಿ ಭಾಗವಹಿಸಿ ಎಂಬ ಘೋಷಣೆಗಳನ್ನು ಕೂಗಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮನವಿ ಮಾಡಿದರು.
ಉಪಪ್ರಾಂಶುಪಾಲ ಕೆ. ಸಂತೋಷ್ ಕುಮಾರ್ ಮಾತನಾಡಿ, ಪ್ರತಿ ಮತಗಟ್ಟೆ ಕೇಂದ್ರದಲ್ಲೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿನ ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಅರ್ಜಿ ಭರ್ತಿ ಮಾಡುವ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದರು.
ಆಗಸ್ಟ್ ತಿಂಗಳಲ್ಲಿ ನಡೆಯುವ ಮತದಾರರ ಹೆಸರು ಸೇರ್ಪಡೆ ಅಭಿಯಾನದಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲ ಅರ್ಹರು ನಮೂನೆ-6 ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಕಡ್ಡಾಯವಾಗಿ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಸಂತೋಷ್ ಕುಮಾರ್, ಶಿಕ್ಷಕರಾದ ಛಾಯಾಮಣಿ, ಸತೀಶ್ ಕುಮಾರ್, ಭಾನುಮತಿ, ವರ್ಷಾ, ಮೇಘನಾ, ಭಾವನಾ, ಜಯಲಕ್ಷ್ಮೀ, ರಘುಪತಿ, ಅರ್ಚನಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.