ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಗಾಯಕಿ ಎಸ್. ಜಾನಕಿ ಅಂತ್ಯಕ್ರಿಯೆ

 ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಭಾನುವಾರ ಎಸ್. ಜಾನಕಿ ಅವರ ಅಂತ್ಯಕ್ರಿ ನೆರವೇರಿತು. ಮೊಮ್ಮಗಳು ಅಪ್ಸರಾ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಭಾನುವಾರ ಎಸ್. ಜಾನಕಿ ಅವರ ಅಂತ್ಯಕ್ರಿ ನೆರವೇರಿತು. ಮೊಮ್ಮಗಳು ಅಪ್ಸರಾ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
Published on
ಮೈಸೂರು: ಹಲವು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಸಂಗೀತಪ್ರಿಯರನ್ನು ರಂಜಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಭಾನುವಾರ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
ಸಿನಿಮಾ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕೀಯ ನಾಯಕರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಜನರು ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಶ್ರೀರಂಗಪಟ್ಟಣದ ಪುರೋಹಿತರಾದ ರಮೇಶ್ ಶರ್ಮ ನೇತೃತ್ವದ 10 ಪುರೋಹಿತರ ತಂಡವು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಜಾನಕಿ ಅವರನ್ನು ಅಂತಿಮ ದಿನಗಳಲ್ಲಿ ನೋಡಿಕೊಳ್ಳುತ್ತಿದ್ದ ನವೀನ್ ಅವರ ಜಮೀನಿನಲ್ಲಿ ಜಾನಕಿ ಅವರ ಅಂತ್ಯಕ್ರಿಯೆ ನೆರವೇರಿತು. ಸಂಜೆ 5.36ಕ್ಕೆ ಮೊಮ್ಮಗಳಾದ ಅಪ್ಸರಾ ಮೃತರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಸೊಸೆ ಉಮಾ, ಸಂಬಂಧಿಕರಾದ ಗಣೇಶ್, ಸಾಕು ಮಗ ನವೀನ್ ಕೈ ಜೋಡಿಸಿದರು. ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಆಗುತ್ತಿದ್ದಂತೆ ಅಭಿಮಾನಿಗಳು ‘ಜಾಾನಕಿ ಅಮ್ಮನಿಗೆ ಜೈ’, ‘ಅಮರ್ ರಹೇ ಜಾನಕಿ ಅಮ್ಮ, ಅಮರ್ ರಹೇ’ ಎಂದು ಘೋಷಣೆ ಕೂಗಿದರು. ಇದರೊಂದಿಗೆ ಜೀವನದ ಗಾನ ಮುಗಿಸಿದ ಸಿರಿ ಕಠದ ಗಾಯಕಿ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನವಾದರು.

ಸರ್ಕಾರದಿಂದ ಗೌರವ ಸಲ್ಲಿಕೆ

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರಿ ಗೌರವಿ ಸಲ್ಲಿಸಲಾಯಿತು. ಖಡ್ಗದಾರಿಯಾಗಿ ಆರ್‌ಪಿಐ ದೇವಿಪ್ರಸಾದ್ ನೇತೃತ್ವದಲ್ಲಿ 10 ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಜತೆಗೆ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಈ ವೇಳೆ ಬಹುತೇಕರು ಜಾನಕಿ ಅವರನ್ನು ನೆನೆದು ಕಣ್ಣೀರು ಸುರಿಸಿದರು.

ಕನ್ನಡ ನಾಡಿನಲ್ಲಿ ವಿದಾಯ

ಕನ್ನಡ ನಾಡನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಜಾನಕಿ ಅವರು ತಮ್ಮ ಜೀವನದ ಅಂತಿಮ ದಿನಗಳನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದಿದ್ದರು. ತಮ್ಮ ಕೊನೆಯ ಪಯಣವೂ ಇದೇ ನೆಲದಲ್ಲಿ ಮುಗಿಯಬೇಕೆಂಬ ಅವರ ಬಯಕೆಯಂತೆ ಮೈಸೂರಿನ ಮಣ್ಣಿನಲ್ಲೇ ಅಂತಿಮ ವಿದಾಯ ದೊರಕಿತು. ಕನ್ನಡದ ಮೇಲೆ ಅವರು ಹೊಂದಿದ್ದ ಅಭಿಮಾನಕ್ಕೆ ಕನ್ನಡಿಗರು ಕಣ್ಣೀರಿನ ನಮನ ಸಲ್ಲಿಸಿದರು.

ಹರಿದು ಬಂದ ಜನಸಾಗರ

ನಗರದ ಅಪೋಲೊ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟ ನಂತರ ಜಾನಕಿ ಅವರ ಮೃತದೇಹವನ್ನು ಬೋಗಾದಿಯ ಮನೆಗೆ ಕೊಂಡೊ ಯ್ಯಲಾಯಿತು. ಮನೆಯಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಮಹಾರಾಜ ಕಾಲೇಜು ಮೈದಾ ನಕ್ಕೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಬೆಳಗ್ಗೆ 8.50ಕ್ಕೆ ಮೃತದೇಹವನ್ನು ತರಲಾಯಿತು.
ಕಾಲೇಜು ಮೈದಾನದಲ್ಲಿ ಬೆಳಗ್ಗೆ 9 ರಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಬೆಳಗ್ಗೆ 9 ರಿಂದ ಮಧ್ಯಾಹ್ನ 3.5ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗಿನ ಜಾವದಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಪ್ರೀತಿಯ ಗಾನಕೋಗಿಲೆಯ ಅಂತಿಮ ದರ್ಶನ ಪಡೆದರು. ಮೃತದೇಹವನ್ನು ಕೊಂಡೊಯ್ಯುವ ಸಂದರ್ಭ ದಲ್ಲೂ ಮಹಾರಾಜ ಕಾಲೇಜು ಮೈದಾನಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಲೇ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net