ಸಿದ್ದರಾಮಯ್ಯ ಇನ್ನೂ 2 ವರ್ಷ ಅಧಿಕಾರದಲ್ಲಿ ಮುಂದುವರಿಯಬೇಕಾಗಿತ್ತು...!

 ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿರುವ ಸಿದ್ದರಾಮಯ್ಯ ಅವರ ಮನೆ.
ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿರುವ ಸಿದ್ದರಾಮಯ್ಯ ಅವರ ಮನೆ.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯ ಪದತ್ಯಾಗ ಹುಟ್ಟೂರಿನಲ್ಲಿ ಬೇಸರ
  • ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಗ್ರಾಮಸ್ಥರು
  • ಸಿದ್ದರಾಮನಹುಂಡಿಯಲ್ಲಿ ಪರೋಕ್ಷ ಆಕ್ರೋಶ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಂತಹ ವ್ಯಕ್ತಿತ್ವ ಮತ್ತೆ ನೋಡಲು ಸಾಧ್ಯವಿಲ್ಲ. ಅವರು ಅಧಿಕಾರದಿಂದ ನಿರ್ಗಮಿಸುತ್ತಿರುವುದು ನೋವುಂಟು ಮಾಡಿದೆ...!
ಪದತ್ಯಾಗ ಮಾಡಿರುವ ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ನಿವಾಸಿ ರಾಮಣ್ಣ ಬೇಸರದ ನುಡಿ ಇದು. 
‘ಸಿದ್ದರಾಮಯ್ಯನಂತಹ ವ್ಯಕ್ತಿ ಮುಂದೆ ಹುಟ್ಟಲ್ಲ. ನಾವು ಚಿಕ್ಕವರಿದ್ದಾಗಿನಿಂದ ನೋಡಿದ್ದು, ಈವರೆಗೆ ಆಡಳಿತ ನಡೆಸಿದ್ದವರೆಲ್ಲೂ ಮೇಲ್ವರ್ಗದವರ ಪರ ನಿಲುವು ಹೊಂದಿದವರು. ಆದರೆ, ಶೋಷಿತರು, ಹಿಂದುಳಿದ ವರ್ಗಗಳವರ ಪರ ಮಾತನಾಡಿದ್ದು ಸಿದ್ದರಾಮಯ್ಯ ಒಬ್ಬರೇ. ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಂತಹ ವ್ಯಕ್ತಿತ್ವ ಮತ್ತೆ ನೋಡಲು ಸಾಧ್ಯ ಇಲ್ಲ’ ಎಂದು ರಾಮಣ್ಣ ಹೇಳಿದರು.
ಇದು ಇವರೊಬ್ಬ ಬೇಸರದ ಮಾತನಲ್ಲ. ಈ ಗ್ರಾಮದಲ್ಲಿ ಬಹುತೇಕ ಮಾತುಗಳು ಇದೇ ದಾಟಿಯಲ್ಲಿ ಕೇಳಿಬಂದವು. ‘ಅಂತಹ ಮನುಷ್ಯನನ್ನು ಅಧಿಕಾರದಿಂದ ಕೆಳಗಿಳಿಸಬಾರದಿತ್ತು’ ಎಂಬ ಪರೋಕ್ಷವಾಗಿ ಆಕ್ರೋಶವೂ ವ್ಯಕ್ತವಾಯಿತು.
‘ಸಿದ್ದರಾಮಯ್ಯ ಅವರನ್ನು ಚಿಕ್ಕಂದಿನಿಂದಲೂ ಗಮನಿಸಿರುವೆ. ನಾನು ಸಿದ್ದರಾಮನಹುಂಡಿಗೆ ಮದುವೆಯಾಗಿ ಬಂದಾಗಿನಿಂದಲೂ ಅವರ ಮನೆ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದು, ಅವರು ಸಿಎಂ ಆಗಿದ್ದು ನಮಗೆ ಸಂತೋಷ ಉಂಟಾಗಿತ್ತು. ಸಾವಿರಾರು ಕೋಟಿ ರೂ. ಖರ್ಚು ಮಾಡಿ ಮೈಸೂರಲ್ಲಿ ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಿಸಿದ್ದಾರೆ. ಇದರಿಂದ ಬಡವರಿಗೆ ನೆರವಾಗಿದೆ. ಅಂತ ಮನುಷ್ಯರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದರೆ ನೋವಾಗುತ್ತದೆ’ ಎಂದು ಸಿದ್ದರಾಮನಹುಂಡಿಯ ಮರಮ್ಮ ಕಣ್ಣೀರು ಹಾಕಿದರು.

ಸಿದ್ದರಾಮನಹುಂಡಿಯ ಸುಪುತ್ರ: 

‘ಈ ಹಿಂದೆ ಕುಗ್ರಾಮವಾಗಿದ್ದ ಸಿದ್ದರಾಮನಹುಂಡಿಯಲ್ಲಿ ಜನಿಸಿ, ರಾಜ್ಯ ರಾಜಕೀಯದಲ್ಲಿ ಛಾಪು ಮೂಡಿಸಿ, 2 ಸಲ ಸಿಎಂ, 2 ಬಾರಿ ಡಿಸಿಎಂ, 2 ಬಾರಿ ವಿಧಾನಸಭೆ ಪ್ರತಿಪಕ್ಷದ ನಾಯಕ, ಹಣಕಾಸು ಮಂತ್ರಿಯಾಗಿ 17 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ನಮ್ಮ ಸಿದ್ದರಾಮನಹುಂಡಿಯ ಸುಪುತ್ರ’ ಎಂದು ಗ್ರಾಮದ ನಿವಾಸಿ ಮಹದೇವ್ ಹೆಮ್ಮೆಯಿಂದ ಹೇಳಿದರು.
‘ಅವರು ಇನ್ನೂ 2 ವರ್ಷ ಅಧಿಕಾರದಲ್ಲಿ ಮುಂದುವರಿಯಬೇಕಾಗಿತ್ತು. ಒಳ್ಳೆಯ ಆಡಳಿತ ನೀಡುತ್ತಿದ್ದರು. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಬೇಕಾಗಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿಗೆ ತೆರಳಿದ ಬೆಂಬಲಿಗರು:

ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಸುದೀರ್ಘ ಅವಧಿಯ ಸಿಎಂ ಆಗಿ ಆಡಳಿತ ನಡೆಸಿದ ದಾಖಲೆ ಬರೆದ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡುತ್ತಿದ್ದಂತೆ ಹುಟ್ಟೂರು ಸಿದ್ದರಾಮನಹುಂಡಿಯ ನಿವಾಸಿಗಳಲ್ಲಿ ಬೇಸರ ಮಡುಗಟ್ಟಿದೆ. ಬೆಳಗ್ಗೆ ಗ್ರಾಮದಿಂದ ಬೆಂಬಲಿಗರು ಬೆಂಗಳೂರಿಗೆ ಹೋಗಿದ್ದಾರೆ. ಬೆಂಗಳೂರಿನ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಧಿಕಾರದಲ್ಲಿ ಮುಂದುವರಿಯುವಂತೆ ಮನವೊಲಿಸುವ ವಿಫಲ ಪ್ರಯತ್ನ ಮಾಡಿದ್ದಾರೆ.

ಹುಟ್ಟೂರಿನಲ್ಲಿ ಬಂದ್‌ನಂತಹ ವಾತಾವರಣ: 

ಸಿದ್ದರಾಮನಹುಂಡಿ ಗುರುವಾರ ಅಕ್ಷರಶಃ ಬಿಕೋ ಎನ್ನುತ್ತಿತ್ತು. ಗ್ರಾಮದಲ್ಲಿ ಬಹುತೇಕ ಪುರುಷರು ಬೆಂಗಳೂರು ಹಾಗೂ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರಿಂದ ಬೆಳಗ್ಗೆಯಿಂದಲೇ ಗ್ರಾಮದಲ್ಲಿ ನೀರವ ಮೌನ ಕವಿದಿದೆ. ಗ್ರಾಮದ ಮಹಿಳೆಯರು ಸುದ್ದಿವಾಹಿನಿಗಳಲ್ಲಿ ಬರುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಇಡೀ ಗ್ರಾಮದಲ್ಲಿ ಬಂದ್‌ನಂತಹ ವಾತಾವರಣ ಗೋಚರವಾಯಿತು.
ಸಿದ್ದರಾಮನಹುಂಡಿಯಲ್ಲಿರುವ ಸಿದ್ದರಾಮಯ್ಯ ಅವರ ನಿವಾಸ, ಅಣ್ಣ ದಿ.ತಮ್ಮಣ್ಣೇಗೌಡ, ತಮ್ಮ ದಿ.ರಾಮೇಗೌಡ, ಕೊನೆಯ ತಮ್ಮ ಸಿದ್ದೇಗೌಡ ಅವರ ನಿವಾಸದಲ್ಲೂ ಮೌನ ಆವರಿಸಿತ್ತು. ಸಂಬಂಧಿಕರ ಮನೆಯಲ್ಲಿ ಎಲ್ಲರೂ ದುಃಖಿತರಾಗಿದ್ದರು.

ಅಕ್ಕಪಕ್ಕದ ಊರಿನಲ್ಲೂ ಮೌನ: 

ಸಿದ್ದರಾಮನಹುಂಡಿ ಅಕ್ಕಪಕ್ಕವಿರುವ ಹೊಸಳ್ಳಿ, ರಂಗನಾಥಪುರ, ಶ್ರೀನಿವಾಸಪುರ, ದೇವೇಗೌಡನಹುಂಡಿ, ಕಡವೆಕಟ್ಟೆಹುಂಡಿ, ಯಡಕೊಳ, ಅಂಚೆಹುಂಡಿ, ಕುಪ್ಪೆಗಾಲ, ಮುದ್ದೇಗೌಡನಹುಂಡಿ ಗ್ರಾಮದಲ್ಲೂ ಸಿದ್ದರಾಮಯ್ಯ ಪದತ್ಯಾಗದಿಂದಾಗಿ ಮೌನ ಕವಿದಿದೆ. ಈ ಎಲ್ಲ ಗ್ರಾಮಗಳು ಯಡಕೊಳ ಪಂಚಾಯಿತಿ ವ್ಯಾಪ್ತಿಗೆ ಬರಲಿದ್ದು, ಇದರ ಕಚೇರಿ ಸಿದ್ದರಾಮನಹುಂಡಿಯಲ್ಲಿದೆ. 
ಗ್ರಾಪಂ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ಸಿದ್ದರಾಮನಹುಂಡಿಯಲ್ಲೇ 650 ಕುಟುಂಬಗಳಿಂದ 5 ಸಾವಿರ ಜನಸಂಖ್ಯೆಯಿದೆ. ಕುರುಬ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇನ್ನಿತರ ಹಿಂದುಳಿದ ವರ್ಗಗಳ ಕಾಯಕ ಸಮಾಜದ ಜನರು ಸಿದ್ದರಾಮನಹುಂಡಿಯಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದು, ಬಹುತೇಕ ಎಲ್ಲ ಸಮುದಾಯದವರು ಸಿದ್ದರಾಮಯ್ಯ ಅವರನ್ನು ಕಂಡರೆ ಗೌರವಿಸುತ್ತಾರೆ. 
ವರುಣ ವಿಧಾನಸಭಾ ಕ್ಷೇತ್ರದ ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿ, ವರಕೋಡು, ಮೆಲ್ಲಹಳ್ಳಿ, ವಾಜಮಂಗಲ, ಭುಗತಗಳ್ಳಿ, ವರುಣ, ಉತ್ತನಹಳ್ಳಿ, ಗುಡಮಾದನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಬೇಸರವುಂಟಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net