ಸಿದ್ದರಾಮಯ್ಯ ಭ್ರಷ್ಟಾಚಾರದ ನಾಯಕ : ಎಚ್. ವಿಶ್ವನಾಥ್ ಟೀಕೆ

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್
Published on
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ನಾಯಕ ಎಂದು ವಿಧಾನ ಪರಿಷತ್ ಎಚ್.ವಿಶ್ವನಾಥ್ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿರೋದು ಕೇವಲ ಬ್ಲಾಕ್ ಮೇಲ್ ತಂತ್ರವಾ ಗಿದೆ. ಇವರು ಚುನಾವಣೆಯಲ್ಲಿ ಸ್ಪರ್ಧಿಸದೆ ಹೋದರೆ ಕುರುಬರು ಯಾರು ಸಹ ಓಟ್ ಹಾಕುವುದಿಲ್ಲ ಎಂಬ ಭಾವನೆ ಮೂಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಓಟ್ ಹಾಕಿ ಕುರುಬರು ಸತ್ತು ಹೋಗಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕುರಿ ಕಾಯುವವರಿಗೆ ಏನು ಸಿಗಲಿಲ್ಲ. ಇವರು ಹಿಂದುಳಿದ ವರ್ಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಲಿ. ಸಿದ್ದರಾಮಯ್ಯ ಬರೀ ಬುಡಂಗಿ, ಡೋಂಗಿ, ಬೊಗಳೆ ದಾಸ. ಇವರಿಗೆ ಚುನಾವಣೆ ಎದುರಿಸುವಷ್ಟು ಹಣ ಇಲ್ಲವೇ ಎಂದು ಪ್ರಶ್ನಿಸಿದರು.
ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರೆಯುತ್ತೇನೆ, ಚುನಾವಣೆ ರಾಜಕೀಯದಿಂದ ಮಾತ್ರ ದೂರ ಉಳಿಯುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲಿ ನಮ್ಮ ನಾಯಕರೆಲ್ಲ ದೆಹಲಿಗೆ ಹೋಗಿ ಕುಳಿತ್ತಿದ್ದಾರೆ. ಕೂಡಲೇ ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಭೀಕರ ಬರದಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ. ಭೀಕರ ಬರಗಾಲದ ಸಂದರ್ಭ ದೆಹಲಿಗೆ ಹೋಗಿ ಕುಳಿತುಕೊಳ್ಳುವುದು ಸರಿಯಲ್ಲ. ಹೀಗಾದರೆ ಜನರು ಏನು ಮಾಡಬೇಕು? ಬರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಸಭೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರ ಅಕ್ಷರ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ. ಪ್ರಸ್ತುತ ದೇಶದಲ್ಲೂ ಅರಾಜಕತೆ ಪರಿಸ್ಥಿತಿ ಇದೆ, ನಮ್ಮ ರಾಜ್ಯದಲ್ಲೂ ಅದೇ ಪರಿಸ್ಥಿತಿ ಇದೆ. ಸರ್ಕಾರದ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ರಾಜಕಾರಣಿಗಳೇ ಬಾಗಿಲು ಹಾಕಿಸುತ್ತಿದ್ದಾರೆ. ಆದರೂ ಜನರು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಯಾವುದೇ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಸಮಾಜವಾದಿ ಎಂದು ಹೇಳಿಕೊಂಡ ಸಿದ್ದರಾಮಯ್ಯ ಕೂಡ ಇತ್ತ ಗಮನ ಹರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀಟ್ ಅಕ್ರಮದ ವಿರುದ್ಧ ನಡೆದ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಉಳಿಸಲು ಹೋರಾಟ ನಡೆಯಬೇಕು. ಮಠ ಮಾನ್ಯಗಳೇ ಶಾಲಾ ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿಕೊಂಡಿವೆ. ಸ್ವಾಮೀಜಿಗಳೇನು ಫ್ರೀ ಸೀಟು ಕೊಡ್ತಾ ಇದ್ದಾರಾ? ಮಾಧ್ಯಮಗಳು ಕೂಡ ತನಿಖಾ ವರದಿಗಳನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಪಿಎಸ್‌ಸಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ತಹಸೀಲ್ದಾರ್, ಅಸಿಸ್ಟೆಂಟ್ ಕಮೀಷನರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ಸೃಷ್ಟಿಸುವ ಕೆಪಿಎಸ್‌ಸಿ ಸಂಸ್ಥೆಯೇ ಈ ರೀತಿ ಆದರೆ ಏನು ಮಾಡೋದು? ಜಾತಿ ಆಧಾರದ ಮೇಲೆ ನೇಮಕ ಮಾಡೋದನ್ನು ಬಿಡಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net