ಸಂಕಟ ಬಂದಾಗ ಸಿದ್ದರಾಮಯ್ಯರಿಂದ ಅಹಿಂದ ಜಪ: ಎಂಎಲ್‌ಸಿ ವಿಶ್ವನಾಥ್ ಕಿಡಿ

ಮಾಜಿ ಎಂಎಲ್‌ಸಿ ಎಚ್.ವಿಶ್ವನಾಥ್
ಮಾಜಿ ಎಂಎಲ್‌ಸಿ ಎಚ್.ವಿಶ್ವನಾಥ್
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರದಲ್ಲಿ ಇದ್ದಾಗ ಅಹಿಂದ ನೆನಪು ಬರಲಿಲ್ಲ.
  • ಅಧಿಕಾರ ಕಳೆದುಕೊಂಡ ಬಳಿಕ ನೆನಪು
  • ಅಧಿಕಾರದಲ್ಲಿದ್ದಾಗ ಈ ಸಮುದಾಯಕ್ಕೆ ಏನು ಮಾಡಿದ್ದಾರೆ?
ಮೈಸೂರು: ಸಂಕಟ ಬಂದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಜಪ ಮಾಡುತ್ತಾರೆ ಎಂದು ಮಾಜಿ ಎಂಎಲ್‌ಸಿ ಎಚ್.ವಿಶ್ವನಾಥ್ ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆ ಮಾಡಲು ಈಗ ಹೊರಟಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಅಹಿಂದ ನೆನಪು ಬರಲಿಲ್ಲ. ಅಧಿಕಾರ ಕಳೆದುಕೊಂಡ ಬಳಿಕ ನೆನಪು ಆಗುತ್ತಿದೆ. ಆದರೆ, ಅಧಿಕಾರದಲ್ಲಿದ್ದಾಗ ಈ ಸಮುದಾಯಕ್ಕೆ ಏನು ಮಾಡಿದ್ದಾರೆ? ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಾಜಿ ಸಿಎಂ ಡಿ.ದೇವರಾಜ ಅರಸು ಅವರಿಗೆ ಸಮ ಅಂತಾರೆ. ಆದರೆ, ಅರಸು ಕಾಲಿನ ಧೂಳಿಗೂ ಸಮರಲ್ಲ. ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಗೆ ಬೆಂಬಲ ಕೊಟ್ಟು ಡಿ.ಕೆ.ಶಿವಕುಮಾರ್‌ಗೆ ಕಿರುಕುಳ ಕೊಡುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಸಿದ್ಧಪಡಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ರಾಜೀನಾಮೆ ಕೊಡುವ ಹಿಂದಿನ ದಿನ ಸ್ವೀಕರಿಸಿದರು. ಆದರೆ, ಅದನ್ನು ಜಾರಿ ಮಾಡಲಿಲ್ಲ. ಆದರೆ, ಈಗ ಅಹಿಂದವನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ದೂರಿದರು.
ಪುತ್ರ ಯತೀಂದ್ರ ಮುಂದೆ ಯಾರೂ ಬೆಳೆಯದಂತೆ ಕುತಂತ್ರ ಮಾಡಿದ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿಲ್ಲ. ಹಾಗಾದರೆ ಕುರುಬರು ಏಕೆ ಅವರಿಗೆ ಸಹಾಯ ಮಾಡಬೇಕು ಎಂದು ಗುಡುಗಿದರು.
ಸಿದ್ದರಾಮಯ್ಯ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಸ್ಪಧಿಸಲ್ಲ ಎಂಬುದೆಲ್ಲ ಬೊಗಳೆ. 2028ರ ಚುನಾವಣೆಗೆ ಸಿದ್ದರಾಮಯ್ಯ ಗ್ಯಾಂಗ್ ಡಿ.ಕೆ.ಶಿವಕುಮಾರ್ ಎತ್ತಿ ಕಟ್ಟುತ್ತಾರೆ. ಮತ್ತೆ ಗಬ್ಬೆಬ್ಬಿಸಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವಂತೆ ಮಾಡುತ್ತಾರೆ ಎಂದು ಹರಿಹಾಯ್ದರು
2013ರಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ದಲಿತ ಸಿಎಂ ಎಂದು ಬಿಂಬಿಸಲಾಯಿತು. ಆದರೆ, ಆಗ ಇದೇ ಪರಮೇಶ್ವರ ಅವರನ್ನು ಸೋಲಿಸಿದ್ದರು. ಈಗ ಅವರನ್ನು ಡಿಸಿಎಂ ಮಾಡಿದೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸದರು.
ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ. ಖಾಸಗಿ ಖಜಾನೆ ಉಸ್ತುವಾರಿ ಆಗಿದ್ದ ಕಾರಣ ಬೈರತಿ ಸುರೇಶ್‌ಗೆ ಸಚಿವ ಸ್ಥಾನ ಕೊಡಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕುರುಬರನ್ನು ಸಚಿವನ್ನಾಗಿ ಮಾಡಲಿಲ್ಲ. ಕುರುಬ ಸಮುದಾಯದವರು ಉತ್ತರ ಕರ್ನಾಟಕದಲ್ಲಿ 60ರಷ್ಟಿದ್ದಾರೆ. ಯಾರನ್ನು ಸಚಿವರನ್ನಾಗಿ ಮಾಡಲಿಲ್ಲ ಎಂದು ಕುಟುಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net