ರಂಗದ ಮೇಲೆ ಶ್ವೇತಾ ಮಡಪ್ಪಾಡಿ ವಿಶಿಷ್ಟ ರಂಗ ಪ್ರದರ್ಶನ ಯಶಸ್ವಿ

ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ಅವರು ‘ಚಿತ್ರಾಂಗದಾ’ ಖಂಡ ಕಾವ್ಯವನ್ನು ಏಕವ್ಯಕ್ತಿ ಭಾವಾಭಿನಯದ ಮೂಲಕ ರಂಗದ ಮೇಲೆ ಪ್ರಸ್ತುತಪಡಿಸಿದರು.
ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ಅವರು ‘ಚಿತ್ರಾಂಗದಾ’ ಖಂಡ ಕಾವ್ಯವನ್ನು ಏಕವ್ಯಕ್ತಿ ಭಾವಾಭಿನಯದ ಮೂಲಕ ರಂಗದ ಮೇಲೆ ಪ್ರಸ್ತುತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ಏಕವ್ಯಕ್ತಿ ಭಾವಾಭಿನಯ
  • ಚಿತ್ರಾಂಗದೆ ಬದುಕಿನ ಚಿತ್ರಣ ಅನಾವರಣ
  • ದಿಗ್ವಿಜಯ ಹೆಗ್ಗೋಡು ನಿರ್ದೇಶನದ ಜತೆಗೆ ಅವರೇ ಸಂಗೀತ ನಿರ್ದೇಶನ
ಮೈಸೂರು: ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿರುವ ಮಹಾಕವಿ ಕುವೆಂಪು ಅವರ ‘ಚಿತ್ರಾಂಗದಾ’ ಖಂಡ ಕಾವ್ಯವನ್ನು ಧ್ವನಿ ಫೌಂಡೇಷನ್‌ನ ಮುಖ್ಯಸ್ಥೆ, ಯುವ ಉದ್ಯಮಿ ಮತ್ತು ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ಅವರು ಏಕವ್ಯಕ್ತಿ ಭಾವಾಭಿನಯದ ಮೂಲಕ ರಂಗದ ಮೇಲೆ ತರುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಧ್ವನಿ ಫೌಂಡೇಷನ್ ವತಿಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶನಿವಾರ ಮತ್ತು ಭಾನುವಾರ ಡಾ.ಶ್ವೇತಾ ಮಡಪ್ಪಾಡಿ ಅವರು ಭಾವಾಭಿನಯ ವಿಶಿಷ್ಟ ರಂಗಪ್ರದರ್ಶನವನ್ನು ಯಶಸ್ವಿಯಾಗಿ ಪ್ರಸ್ತುತಪಡಿಸುವ ಮೂಲಕ ರಂಗಾಸಕ್ತ ವಲಯದಲ್ಲಿ ಸೈ ಎನಿಸಿಕೊಂಡರು. ಸುಮಾರು ಒಂದು ಗಂಟೆ ಹತ್ತು ನಿಮಿಷ ಅವಧಿಯ ಈ ಪ್ರಯೋಗದಲ್ಲಿ ಚಿತ್ರಾಂಗದೆಯ ಬದುಕಿನ ಚಿತ್ರಣ ಡಾ.ಶ್ವೇತಾ ಮಡಪ್ಪಾಡಿ ಅವರ ಅಭಿನಯದಲ್ಲಿ ಅನಾವರಣಗೊಂಡಿತು.
ಹಳೆಗನ್ನಡದ ಮೇಲಿನ ಶ್ವೇತಾ ಅವರ ಪ್ರೀತಿ, ಪ್ರಖಂಡ ಜ್ಞಾಪಕ ಶಕ್ತಿ, ಪ್ರಬುದ್ಧ ಅಭಿನಯ ಪ್ರೇಕ್ಷಕರನ್ನು ಪ್ರದರ್ಶನದ ಪೂರ್ತಿ ಕಟ್ಟಿಹಾಕಿತು. ಒಮ್ಮೆ ಪ್ರೀತಿಗೆ ಹಾತೊರೆಯುವ ಲಲನೆಯಾಗಿ, ತಪಸ್ಸಿಗೆ ಕುಳಿತ ಅರ್ಜುನನಾಗಿ, ವರನೀಡುವ ಮದನನಾಗಿ, ಸಂತೈಸಿದ ತಾಯಿಯಾಗಿ, ವೀರಾವೇಷದಿ ಹೋರಾಡಿದ ಬಬ್ರುವಾಹನನಾಗಿ, ತಂದೆ ಮಕ್ಕಳ ಹೋರಾಟದ ಮಧ್ಯೆ ಕನಲಿ ಕೊನೆಯಾದ ಚಿತ್ರಾಂಗದೆಯ ಅಭಿನಯ ಅದ್ಭುತವಾಗಿತ್ತು.
ಈ ಪ್ರಸ್ತುತಿಗೆ ದಿಗ್ವಿಜಯ ಹೆಗ್ಗೋಡು ಅವರ ನಿರ್ದೇಶನದ ಜತೆಗೆ ಅವರೇ ಸಂಗೀತ ನಿರ್ದೇಶನವನ್ನು ಮಾಡಿದ್ದರು. ಕುವೆಂಪು ಅವರ ಗಟ್ಟಿ ಭಾಷೆಯನ್ನು ಸಂಗೀತ ಮತ್ತು ಮಾತಿನ ಧಾಟಿಗೆ ಬಗ್ಗಿಸಿ ದೃಶ್ಯ ಕಾವ್ಯವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುವೆಂಪು ಅವರ ಪುತ್ರಿ ತರಿಣಿ ಹಾಗೂ ಚಿದಾನಂದ ಗೌಡ ಸೇರಿ ಅನೇಕರು ಪ್ರದರ್ಶನ ವೀಕ್ಷಿಸಿದರು.
ಮಂಗಳೂರಿನ ಸಂದೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಭರತನಾಟ್ಯದಲ್ಲಿ ಬಿ.ಎ. ಪದವಿ ಪಡೆದ ಶ್ವೇತಾ ಮಡಪ್ಪಾಡಿ, ಮೈಸೂರು ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಮೊದಲ ರ‌್ಯಾಂಕ್‌ನೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ವಸಾಹತುಶಾಹಿ ಸಂದರ್ಭ: ಜನಪದ ಹಾಡುಗಳು ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net