ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಶಿವರಾತ್ರಿ ಆಚರಣೆ

 ಶಿವರಾತ್ರಿ ಅಂಗವಾಗಿ ಮೈಸೂರು ನಗರದ ಅವಧೂತ ದತ್ತ ಪೀಠದಲ್ಲಿ ಶಿವಲಿಂಗಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪೂಜೆ ಸಲ್ಲಿಸಿದರು.
ಶಿವರಾತ್ರಿ ಅಂಗವಾಗಿ ಮೈಸೂರು ನಗರದ ಅವಧೂತ ದತ್ತ ಪೀಠದಲ್ಲಿ ಶಿವಲಿಂಗಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪೂಜೆ ಸಲ್ಲಿಸಿದರು.
Published on
ಮೈಸೂರು: ಅವಧೂತ ದತ್ತ ಪೀಠದ ಇತಿಹಾಸದಲ್ಲಿ ಭಾನುವಾರ 60ನೇ ವರ್ಷದ ಶಿವರಾತ್ರಿ ಮಹೋತ್ಸವವಾಗಿದ್ದು, ಆಶ್ರಮದಲ್ಲಿ ಸಡಗರ ಮನೆಮಾಡಿದೆ ಎಂದು ಅವಧೂತ ದತ್ತ ಪೀಠದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಶಿವರಾತ್ರಿ ಮಹೋತ್ಸವದ ಅಂಗವಾಗಿ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಂಗಳಾರತಿ ಸಲ್ಲಿಸಿದ ನಂಗರ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿವರಾತ್ರಿಯ ಅಂಗವಾಗಿ 24 ಗಂಟೆಗಳ ಕಾಲ ನಿರಂತರ ಶಿವ ಸ್ಮರಣೆ, ಜಾಗರಣೆ, ಸಂಗೀತ ಮತ್ತು ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಮಿಳುನಾಡಿನಿಂದ ಆಗಮಿಸಿರುವ ವಿಶೇಷ ಕಲಾವಿದರು ಪಂಚಭೂತಗಳಿಗೆ ಸಂಬಂಧಿಸಿದಂತೆ 11 ಬಗೆಯ ವಿಶೇಷ ಅಲಂಕಾರಗಳನ್ನು ಮಾಡಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಒಳಗೆ ಮತ್ತು ಹೊರಗೆ ಎಂದು ಎರಡು ಕಡೆ ಶಿವಲಿಂಗ ದರ್ಶನ ಮತ್ತು ಅಭಿಷೇಕಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಜ್ಞಾನ ಮತ್ತು ಅಧ್ಯಾತ್ಮದ ಬೆಸುಗೆ: ಶಿವನ ತತ್ವವನ್ನು ವಿವರಿಸಿದ ಶ್ರೀಗಳು, ಶಿವ ನಿರ್ವಿಕಾರ ಸ್ವರೂಪಿ. ಆತನು ಭಕ್ತರು ಬೇಡಿದ ರೂಪದಲ್ಲಿ ಕಾಣಿಸಿಕೊಳ್ಳುವ ವಿಶ್ವರೂಪಿ. ನಾಸಾ ವಿಜ್ಞಾನಿಗಳು ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಆಕಾಶ ಮತ್ತು ನಮ್ಮ ಕ್ಷೀರಪಥವೇ ಒಂದು ಲಿಂಗಾಕಾರದಲ್ಲಿದೆ. ಇಡೀ ಪ್ರಪಂಚವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ ಎಂದರು.
ನಗರದಲ್ಲಿ ಶನಿವಾರ ನಡೆದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶ್ರೀಗಳು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಎಂದರು.
ಸಾವಿರಾರು ಮಂದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮೈಸೂರಿನ ಧಾರ್ಮಿಕ ಇತಿಹಾಸದಲ್ಲಿ ದಾಖಲೆಯಾಗಿದೆ. ಈ ಯಶಸ್ಸಿಗೆ ಕೇವಲ ನಾನೊಬ್ಬನೇ ಕಾರಣನಲ್ಲ. ಮಾಧ್ಯಮ ಮಿತ್ರರು, ಆಟೋ ರಿಕ್ಷಾ ಚಾಲಕರು, ಕಾರ್ಯಕರ್ತರು ಮತ್ತು ಭಕ್ತರು ನಡೆಸಿದ ನಿರಂತರ ಪ್ರಚಾರವೇ ಈ ಅಭೂತಪೂರ್ವ ಯಶಸ್ಸಿಗೆ ಕಾರಣ, ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿದೇಶಿಯರು ಕೂಡ ಮೈಸೂರಿನ ಭಕ್ತಿ ಭಾವವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ ಎಂದು ಅವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net