ಜನರ ಮನದಲ್ಲಿ ಉಳಿದಿರುವ ಶರಣರ ಸಾಹಿತ್ಯ

ಹುಣಸೂರು ನಗರದ ಕಲಾಧರೆ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಯುವಕವಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಮೋದೂರು ಮಹೇಶಾರಾಧ್ಯ, ಡಾ.ಮಾದುಪ್ರಸಾದ್, ಕುಮಾರ್ ಹೊನ್ನೇನಹಳ್ಳಿ, ರೇಣುಕಾಪ್ರಸಾದ್ ಇದ್ದರು.
ಹುಣಸೂರು ನಗರದ ಕಲಾಧರೆ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಯುವಕವಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಮೋದೂರು ಮಹೇಶಾರಾಧ್ಯ, ಡಾ.ಮಾದುಪ್ರಸಾದ್, ಕುಮಾರ್ ಹೊನ್ನೇನಹಳ್ಳಿ, ರೇಣುಕಾಪ್ರಸಾದ್ ಇದ್ದರು.
Published on
ಹುಣಸೂರು: ಅನುಭವ ಜನ್ಯವಾದ ಸಾಹಿತ್ಯ ಬಹುಕಾಲ ಜನರ ಮನದಲ್ಲಿ ಉಳಿಯುತ್ತದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ಶೂನ್ಯ ಪೀಠ ವೇದಿಕೆ ಮತ್ತು ಕಲಾಧರೆ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯನ್ನು ಮದ್ದಲೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕವಿ ತಾನು ಬದುಕಲ್ಲಿ ಕಂಡ ಲೋಕಾನುಭವಗಳಿಗೆ ಸಾಹಿತ್ಯದ ರೂಪ ನೀಡಬಹುದು. ಇದರಿಂದಲೇ ಹನ್ನೆರಡನೇ ಶತಮಾನದ ಶರಣರು ಬರೆದ ಸಾಹಿತ್ಯ ಇಂದಿಗೂ ಅಳಿಯದೆ ಉಳಿದಿದೆ ಎಂದರು.
ಸಾಹಿತ್ಯ ಸಹೃದಯರೆದೆಗೆ ನಾಟಿದಾಗ ಮಾತ್ರ ಹೆಚ್ಚು ಕಾಲ ಉಳಿಯಬಲ್ಲದು. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಹೃದಯರ ಮನಸ್ಸಿಗೆ ಮುದ ನೀಡುತ್ತಲೇ ಇದೆ. ಲಿಪಿಗಳಿಲ್ಲದ ಕಾಲದಲ್ಲೂ ಸಾಹಿತ್ಯ ಜನಪದರ ಮೂಲಕ ತಲೆಮಾರುಗಳಿಗೆ ಹರಿದು ಬರುತ್ತಿತ್ತು ಎಂದರು.
ಕವಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಾವ್ಯವನ್ನು ರಚಿಸಬೇಕು. ಕವಿ ಯಾವುದಾದರೂ ಸಿದ್ಧಾಂತಕ್ಕೆ ಕಟ್ಟು ಬಿದ್ದರೆ ಅದರಿಂದ ಲೋಕ ಮೆಚ್ಚುವ ಸಾಹಿತ್ಯದ ಸೃಜನೆ ಸಾಧ್ಯವಾಗುವುದಿಲ್ಲ, ಜತೆಗೆ ಕವಿಯ ಸ್ವಾತಂತ್ರೃ ಹರಣವೂ ಆಗುತ್ತದೆ. ಒಂದೇ ವಿಷಯ ಬೇರೆಬೇರೆ ಕವಿಗಳಿಗೆ ವಿಭಿನ್ನವಾಗಿ ಕಾಣಬಹುದು. ಬೆಳಗನ್ನು ವರಕವಿ ಬೇಂದ್ರೆ ನೋಡುವ ಬಗೆಗಿಂತ ಶ್ರೀಕೃಷ್ಣ ಆಲನಹಳ್ಳಿ ನೋಡುವ ಬಗೆ ಬೇರೆಯಾಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಡಾ.ಮಾದುಪ್ರಸಾದ್ ಮಾತನಾಡಿ, ಕನ್ನಡ ಕಾವ್ಯ ಪರಂಪರೆ ಎಲ್ಲ ಮಾರ್ಗಗಳನ್ನು ದಾಟಿ ಬಂದು ಇಂದು ವಿಫುಲವಾಗಿ ಬೆಳೆದು ನಿಂತಿದೆ. ಪುರಾತನ ಕಾವ್ಯ ಪ್ರಕಾರಗಳು ಇಂದು ಪ್ರಚಲಿತವಾಗಿಲ್ಲದಿದ್ದರೂ ಜನರ ನೋವಿಗೆ ಮಿಡಿವ ಕಾವ್ಯಗಳು ಇಂದಿಗೂ ಸೃಷ್ಟಿಯಾಗುತ್ತಲೇ ಇದ್ದು ಕನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯುತ್ತಲೇ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿ ಕುಮಾರ್ ಹೊನ್ನೇನಹಳ್ಳಿ ಮಾತನಾಡಿ, ಸಾಹಿತ್ಯ ನಿತ್ಯನಿರಂತರವಾದ ಬದಲಾವಣೆಯನ್ನು ಪಡೆದುಕೊಳ್ಳುತ್ತಲೇ ಇರುತ್ತದೆ. ಕವಿಯಾಗುವವನು ಅಧ್ಯಯನಶೀಲನಾಗಿರಬೇಕು ಎಂದು ಸಲಹೆ ನೀಡಿದರು.
ಡಾ.ರೇಣುಕಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಕವಿಗಳು ಮತ್ತು ಕವಯತ್ರಿಯರು ಕವಿತೆಗಳನ್ನು ವಾಚಿಸಿದರು. ಕಲಾಧರೆ ಸಂಸ್ಥೆಯ ಹುಣಸೂರು ಅರ್ಜುನ್, ಸುಭಾಶ್ ಮುಂತಾದವರು ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲ ಕವಿ ಮತ್ತು ಕವಯತ್ರಿಯರಿಗೆ ಪ್ರಶಂಸಾಪತ್ರ ಮತ್ತು ನೆನಪಿನ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net