ಚಿನ್ನದ ಪದಕ ಪಡೆದ ಶನಿಲಾಗೆ ಸನ್ಮಾನ

ಎಚ್.ಡಿ.ಕೋಟೆ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶನಿಲಾ ಅವರನ್ನು ಕಾಲೇಜಿನ ಪ್ರಾಂಶುಪಾಲ ಜೆ.ಎನ್ ವೆಂಕಟೇಶ್ ಅಭಿನಂದಿಸಿದರು.
ಎಚ್.ಡಿ.ಕೋಟೆ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶನಿಲಾ ಅವರನ್ನು ಕಾಲೇಜಿನ ಪ್ರಾಂಶುಪಾಲ ಜೆ.ಎನ್ ವೆಂಕಟೇಶ್ ಅಭಿನಂದಿಸಿದರು.
Published on
ಎಚ್.ಡಿ.ಕೋಟೆ: ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ 2025ನೇ ಸಾಲಿನಲ್ಲಿ ಬಿಕಾಂ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಚಿನ್ನದ ಪದಕ ಪಡೆದ ಶನಿಲಾ ಅವರನ್ನು ಶ್ರೀ ಆದಿಚುಂಚನಗಿರಿ ಪದವಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿಲಾರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಎನ್.ವೆಂಕಟೇಶ್ ಮಾತನಾಡಿ, ಶನಿಲಾ ಕನ್ನಡ ಭಾಷಾ ವಿಷಯದಲ್ಲಿ 4 ಸೆಮಿಸ್ಟರ್‌ಗಳಲ್ಲಿ 400ಕ್ಕೆ 373 ಅಂಕ ಪಡೆದು ಮೈಸೂರು ವಿವಿ ನೀಡುವ ಅಜೀಜ್ ಸೇಠ್ ಚಿನ್ನದ ಪದಕಕ್ಕೆ ಪಾತ್ರಳಾಗಿ ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ಪೀರ್ದೋಸ್ ಮತ್ತು ನಗ್ಮಾ ವಿದ್ಯಾರ್ಥಿನಿಯರು ಇದೇ ರೀತಿಯಲ್ಲಿ ಸಾಧನೆ ಮಾಡಿ ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಸಾಲಿನಲ್ಲಿ ವಿದ್ಯಾರ್ಥಿನಿ ಶನಿಲಾ ಈ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ. ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಪೂರೈಸಿದ್ದು, ಆ ಮೂಲಕ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲೂ ಪ್ರತಿಭೆ ಇದೆ ಎನ್ನುವುದನ್ನು ತೋರಿಸಿದ್ದಾರೆ ಎಂದರು.
ಶ್ರೀ ಆದಿಚುಂಚನಗಿರಿ ಮೈಸೂರು ಶಾಖ ಮಠದ ಕಾರ್ಯದರ್ಶಿ ಶ್ರೀಸೋಮನಾಥ ಸ್ವಾಮೀಜಿ ಮತ್ತು ಗೌರವ ಆಡಳಿತ ಅಧಿಕಾರಿ ಪ್ರೊ.ಕೆ.ಪಿ.ಬಸವಗೌಡ ಅವರ ಸೂಚನೆ ಮೇರೆಗೆ ವಿದ್ಯಾರ್ಥಿ ಶನಿಲಾ ಅವರನ್ನು ಸರಳವಾಗಿ ಸನ್ಮಾನಿಸಲಾಗಿದೆ. ಮುಂದೆ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು ಎಂದರು.
ಮೈಸೂರು ವಿವಿಯಲ್ಲಿ ನಡೆದ ನಡೆಯಲಿರುವ 106ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಮತ್ತು ಕುಲಪತಿಗಳಿಂದ ಚಿನ್ನದ ಪದಕ ಮತ್ತು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಸ್ತುತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶನಿಲಾ ಅವರ ಸಾಧನೆಗೆ ಕಾರಣರಾದ ಕನ್ನಡ ಭಾಷಾ ವಿಷಯದ ಉಪನ್ಯಾಶಕರಾದ ಚೆನ್ನಕೇಶವ ನಾಯಕ ಹಾಗೂ ಚಂದನ ಡಿ. ಅವರನ್ನು ಸಂಸ್ಥೆ ಸನ್ಮಾನಿಸಲಿದೆ ಎಂದರು.
ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ಕಲ್ಲೇಶಗೌಡ, ಉಪನ್ಯಾಸಕರಾದ ರವೀಶ್, ಸೋಮಶೇಖರ್, ಪ್ರಕಾಶ್ ನಾಯಕ್, ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ರಾಜೇಶ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net