ದಸರಾಗೆ ಹದಿನೇಳು ಉಪ ಸಮಿತಿ ರಚನೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾಹಿತಿ

ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತನ್ವೀರ್‌ಸೇಠ್, ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್‌ಗೌಡ, ಜಿ.ಡಿ.ದೇವೇಗೌಡ, ರವಿಶಂಕರ್, ಸಿ.ಎನ್.ಮಂಜೇಗೌಡ, ಜಿ.ಲಕ್ಷ್ಮೀಕಾಂತರೆಡ್ಡಿ, ಸೀಮಾ ಲಾಟ್ಕರ್ ಇತರರು ಇದ್ದರು.
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತನ್ವೀರ್‌ಸೇಠ್, ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್‌ಗೌಡ, ಜಿ.ಡಿ.ದೇವೇಗೌಡ, ರವಿಶಂಕರ್, ಸಿ.ಎನ್.ಮಂಜೇಗೌಡ, ಜಿ.ಲಕ್ಷ್ಮೀಕಾಂತರೆಡ್ಡಿ, ಸೀಮಾ ಲಾಟ್ಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಂದು ಸಮಿತಿಗೆ ಅಧಿಕಾರಿ ವರ್ಗದವರನ್ನು ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ
  • ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಡ್ರೋನ್ ಶೋ ಅನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸಲಾಗುವುದು
  • ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಏರ್ ಶೋ ಕೂಡ ನಡೆಸಲಾಗುವುದು
  • ಸರ್ಕಾರ ಈ ಬಾರಿ ಕಂಬಳ ಆಚರಿಸಲು ಉದ್ದೇಶಿಸಿದ್ದು, ಅದಕ್ಕೆ ಸಮ್ಮತಿ ದೊರೆತರೆ ಅದಕ್ಕೊಂದು ಉಪ ಸಮಿತಿ ರಚಿಸಲಾಗುವುದು
ಮೈಸೂರು:ಈ ಬಾರಿಯ ದಸರವನ್ನು ವೈಭವಯುತವಾಗಿ ನಡೆಸಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದು, ಅದರಂತೆ ಯಶಸ್ವಿ ದಸರಾಕ್ಕೆ ವಿವಿಧ 17 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ದಸರಾ ಕಾರ್ಯಕಾರಿ ಸಮಿತಿ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಲಹೆ, ಅಭಿಪ್ರಾಯ ಕ್ರೂಢೀಕರಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದಸರಾವನ್ನು ವ್ಯವಸ್ಥಿತವಾಗಿ ನಡೆಸಲು 17 ಉಪಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೆ ಅಧಿಕಾರಿ ವರ್ಗದವರನ್ನು ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ. ರೂಪರೇಷ ರೂಪಿಸಲು ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ದಸರಾದಲ್ಲಿ ವಿಭಿನ್ನ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಡ್ರೋನ್ ಶೋ ಅನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸಲಾಗುವುದು. ಜತೆಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಏರ್ ಶೋ ಕೂಡ ನಡೆಸಲಾಗುವುದು ಎಂದರು.
ದಸರಾದೊಳಗೆ ಪೂರ್ಣಗೊಳಿಸಬೇಕು:
ಫ್ಲೆಕ್ಸ್ ಮುಕ್ತ ಮಾಡಬೇಕು ಎಂಬ ಸಲಹೆಗಳು ಬಂದಿದ್ದು, ನಿಗದಿತ ಸ್ಥಳದಲ್ಲಿ ಮಾತ್ರ ಫ್ಲೆಕ್ಸ್‌ಗೆ ಅವಕಾಶ ನೀಡಲಾಗುವುದು. ಬಳಿಕ ನೀಡಿರುವ ಅವಧಿಯೊಳಗೆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು. ಪಾಲಿಕೆಗೂ ಆದಾಯ ಬರುವುದರಿಂದ ಸಂಪೂರ್ಣವಾಗಿ ಫ್ಲೆಕ್ಸ್‌ಗಳನ್ನು ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಆದರೆ ಫ್ಲೆಕ್ಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಂಚಾರಕ್ಕೆ ತೊಂದರೆಯಾಗುವಂತೆ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ ಮೈಸೂರಿನಲ್ಲಿ ಅಷ್ಟೊಂದು ಸಮಸ್ಯೆ ಇಲ್ಲದಿದ್ದರೂ ಜನರ ಸಂಚಾರಕ್ಕೆ ತೊಂದರೆಯಾಗುವ ಕಡೆಗಳಲ್ಲಿ ಫುಟ್‌ಪಾತ್ ತೆರವುಗೊಳಿಸಿ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ನಗರದಲ್ಲಿ ಒತ್ತುವರಿ ತೆರವು ನಡೆಯುತ್ತಿದ್ದ್ದು, ದಸರಾ ಒಳಗಾಗಿ ಎಲ್ಲವೂ ಪೂರ್ಣ ಆಗತ್ತದೆ ಎಂದರು.
ಪಾಸ್ ಗೊಂದಲಕ್ಕೆ ತೆರೆ
ದಸರಾ ವೀಕ್ಷಣೆಯ ’ಗೋಲ್ಡ್ ಪಾಸ್’ ಗೊಂದಲಗಳಿಗೆ ತೆರೆ ಎಳೆಯಲಾಗುವುದು. ಆಸನಗಳ ಸಂಖ್ಯೆಗೆ ತಕ್ಕಂತೆ ಮಾತ್ರ ಪಾಸ್‌ಗಳನ್ನು ಮುದ್ರಿಸಿ, ಹಣ ನೀಡಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ನೀಡಲಾಗುವುದು. ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್‌ಗೆ ಈ ಬಾರಿ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ದಸರಾ ನಮ್ಮ ರಾಜ್ಯದ ಹೆಮ್ಮೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ದಸರಾ ಕಾರ್ಯಕ್ರಮ ನಡೆಯುವ ಸ್ಥಳ, ನಗರದ ರಸ್ತೆಗಳಲ್ಲಿ ನೈರ್ಮಲ್ಯ ಕಾಪಾಡಬೇಕು, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು, ತಾಲೂಕು ಮಟ್ಟದ ಕ್ರೀಡೋತ್ಸವ ನಡೆಸಬೇಕು ಎನ್ನುವುದು ಸೇರಿದಂತೆ ಇನ್ನಿತರೆ ಉತ್ತಮ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಪರಿಗಣಿಸಿ ಈ ಬಾರಿಯ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಕಂಬಳಕ್ಕೆ ಉಪಸಮಿತಿ ರಚನೆ:
ಸರ್ಕಾರ ಈ ಬಾರಿ ಕಂಬಳ ಆಚರಿಸಲು ಉದ್ದೇಶಿಸಿದ್ದು, ಅದಕ್ಕೆ ಸಮ್ಮತಿ ದೊರೆತರೆ ಅದಕ್ಕೊಂದು ಉಪ ಸಮಿತಿ ರಚಿಸಲಾಗುವುದು ಎಂದು ಸಚಿವ ಡಾ.ಯತೀಂದ್ರ ತಿಳಿಸಿದರು.
ಈ ಬಾರಿಯ ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ‘ಕಂಬಳ’ವನ್ನು ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕಂಬಳ ಆಯೋಜನೆ ಖಚಿತವಾದರೆ ಸಾತಗಳ್ಳಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ‘ಸೈಕ್ಲಿಂಗ್ ವೆಲೋಡ್ರೋಮ್’ ಪ್ರದೇಶವನ್ನು ಕಂಬಳಕ್ಕಾಗಿ ಪರಿಶೀಲಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಅಂತಿಮ ಸೂಚನೆಯ ನಂತರ ನಿರ್ಧಾರ ಹೊರಬೀಳಲಿದೆ ಎಂದರು.
ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ
ದಸರಾವನ್ನು ಪ್ರತಿ ವರ್ಷ ಯಾರಾದರೂ ಖ್ಯಾತ ನಾಮರು ಉದ್ಘಾಟಿಸಿಕೊಂಡು ಬರುವುದು ವಾಡಿಕೆಯಾಗಿದೆ. ಈ ಬಾರಿ ಹಲವಾರು ಜನರ ಹೆಸರುಗಳು ಕೇಳಿ ಬರುತ್ತಿದ್ದು, ಶಾಸಕರಿಂದಲೂ ಹಲವರ ಹೆಸರು ಕೇಳಿ ಬಂದಿವೆ. ಆದರೆ ಅಂತಿಮವಾಗಿಯಾರನ್ನು ಆಹ್ವಾನಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಲಿದ್ದಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸಭೆಯಲ್ಲಿ ಕೇಳಿ ಬಂದ ಸಲಹೆಗಳು:
ಶಾಸಕ ತನ್ವೀರ್‌ಸೇಠ್ ಮಾತನಾಡಿ, ಗಣ್ಯರಿಗೆ ಮಾತ್ರ ದಸರಾ ಎನ್ನುವಂತಾಗದೆ ಸಾರ್ವಜನಿಕರು ಪಾಲ್ಗೊಳ್ಳಲು ನಾಡ ಹಬ್ಬ ದಸರಾವನ್ನು ಆಚರಿಸಬೇಕಾಗುತ್ತದೆ. ದಸರಾ ಕಾರ್ಯಕ್ರಮ ಅರ್ಥಯುತವಾಗಿ ಮೂಡಿಬರಲು ಸಮಿತಿ ರಚಿಸಿ ಸಮಿತಿಯಲ್ಲಿ ಅಧಿಕಾರೇತರ ಸದಸ್ಯರನ್ನು ನಿಯೋಜಿಸುವುದು ವಾಡಿಕೆ. ಆದರೆ, ಅಧಿಕಾರೇತರರ ಸಂಖ್ಯೆಯನ್ನು ಸೀಮಿತಪಡಿಸಬೇಕು. ದಸರಾ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಕೃತಕ ಬೇಡಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ನಗರಕ್ಕೆ ನಾಲು ಭಾಗದಲ್ಲಿ ಹೆಲ್ಪ್ ಡೆಸ್ಕ್ ತೆರೆದು, ಆಗಮಿಸುವ ಜನರಿಗೆ ನಿಖರ ಮಾಹಿತಿ ನೀಡಿ, ಲೈಟಿಂಗ್ ವೀಕ್ಷಣೆ ಮಾಡಲು ಪ್ರವಾಸೋದ್ಯಮದ ಬಸ್‌ನಂತೆ ವಿಶೇಷ ಟಾಂಗಾ ವ್ಯವಸ್ಥೆ ಮಾಡಿ ದರ ನಿಗಧಿಪಡಿಸಬೇಕು. ಗೋಲ್ಡ್ ಪಾಸ್ ಹೊಂದಿರುವವರಿಗೆ ಕಿರಿಕಿರಿಯಾಗದಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಈಗಿನಿಂದಲೇ ಪ್ರಾರಂಭ ವಾಗಬೇಕು ಎಂದು ಹೇಳಿದರು.
ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಬುಡಕಟ್ಟು ಜನರಿಗೆ ದಸರಾ ದೀಪಾಲಂಕಾರ, ಚಾಮುಂಡಿಬೆಟ್ಟ, ಫ್ಲವರ್ ಶೋ ವೀಕ್ಷಿಸಲು ಒಂದು ದಿನ ವಿಶೇಷ ಅವಕಾಶ ನೀಡಬೇಕು. ದಸರಾ ಸಂದರ್ಭದಲ್ಲಿ ಕಬಿನಿ ಉತ್ಸವ ಆಚರಿಸಬೇಕು ಎಂದು ಮನವಿ ಮಾಡಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಈ ಬಾರಿ ಮಳೆಯ ಅಭಾವವಿದ್ದು, ವಿದ್ಯುತ್ ಖರೀದಿಸಬೇಕಿದ್ದು, ಡ್ರೋನ್ ಶೋಗೆ ಪ್ರಾಯೋಜಕತ್ವ ಒದಗಿಸಿಕೊಡಬೇಕು. ದೀಪಾಲಂಕಾರ ಸಮಿತಿಗೆ ಹೆಚ್ಚಿನ ಅನುದಾನ ಒದಗಿಸಿಕೊಡಬೇಕು ಎಂದು ಕೋರಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಕೆ ಹರೀಶ್‌ಗೌಡ, ದರ್ಶನ್‌ಧ್ರುವನಾರಾಯಣ, ಡಿ.ರವಿಶಂಕರ್, ಜಿ.ಡಿ. ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಕೆ. ವಿವೇಕನಂದ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತ ಅನುಚೇತ್, ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net