‘ಶಕ್ತಿ ಯೋಜನೆ’ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗಲೇ ಬಸ್‌ಗಳ ಕೊರತೆಯೂ ಕಾಣಿಸಿಕೊಂಡಿದೆ. ಮೈಸೂರು ನಗರ ವ್ಯಾಪ್ತಿಗೆ ರಾಜ್ಯ ಸರ್ಕಾರದಿಂದ ನೂರು ಹೊಸ ಬಸ್‌ಗಳನ್ನು ಮಂಜೂರು ಮಾಡಿದ್ದು, ಈ ಬಸ್‌ಗಳು ಕಾರ್ಯಾಚರಣೆ ಶುರು ಮಾಡುವ ಹೊತ್ತಿಗೆ 75 ಬಸ್‌ಗಳ ಅವಧಿ ಮುಗಿದಿದ್ದರಿಂದ ಗುಜರಿಗೆ ಸೇರಲಿವೆ. ಹಾಗಾಗಿ, 25 ಬಸ್‌ಗಳು ಉಳಿಯಲಿದ್ದು, ಮತ್ತೆ ನೂರು ಬಸ್‌ಗಳನ್ನು ಖರೀದಿಸಲು ಬೇಡಿಕೆ ಸಲ್ಲಿಸಲಾಗಿದೆ. ಈಗ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ಮಾಡಿದರೆ ಐಟಿ-ಬಿಟಿ ಸಂಸ್ಥೆಗಳು, ಪ್ರತಿಷ್ಠಿತ ಕಾಲೇಜುಗಳ ಮಾರ್ಗ, ಚಾಮುಂಡಿಬೆಟ್ಟದ ಮಾರ್ಗಕ್ಕೆ ಕಳುಹಿಸಲು ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.