ಜಯದೇವ ಆಸ್ಪತ್ರೆಯಲ್ಲಿ ಹಿರಿಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್

ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಡಾ. ಹರ್ಷಬಸಪ್ಪ, ಡಾ. ರಜಿತ್, ಡಾ. ಜಯಶೀಲನ್, ಡಾ. ಮಂಜುನಾಥ್ ಇತರರಿದ್ದರು.
ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಡಾ. ಹರ್ಷಬಸಪ್ಪ, ಡಾ. ರಜಿತ್, ಡಾ. ಜಯಶೀಲನ್, ಡಾ. ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 60 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ
  • ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಮಾಹಿತಿ
ಮೈಸೂರು: ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆದು ನೋಂದಣಿ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿದಿನ ಸುಮಾರು 800 ಜನ ಹೊರರೋಗಿಗಳು ದೂರದ ಊರುಗಳಿಂದ ಬೆಳಗ್ಗೆ 6 ಗಂಟೆಗೆ ಬಂದು ಕಾಯುತ್ತಿರುತ್ತಾರೆ. ಅವರಲ್ಲಿ ವೃದ್ಧರು, ಅಂಗವಿಕಲರು, ಹಿರಿಯ ನಾಗರಿಕರೂ ಇರುತ್ತಾರೆ. ಅವರಿಗೆ ಅನುಕೂಲವಾಗಲೆಂದು ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದು ಹೇಳಿದರು
ಹೊರಗೆ ಸಾಲಿನಲ್ಲಿ ನಿಲ್ಲುವವರಿಗೆ, ಮಳೆ ಬಿಸಿಲಿಗೆ ಆಸರೆಯಾಗಿ ಛಾವಣಿ ಹಾಗೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿಕೊಡಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.
180 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ಕಟ್ಟಡ ನಿರ್ಮಿಸುವ ಜಾಗವನ್ನು ಪರಿಶೀಲಿಸಿದ ಅವರು, ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭೂಮಿಪೂಜೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಕಟ್ಟಡದ ಕಾಮಗಾರಿ ಪ್ರಾರಂಭವಾದ 24 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.
ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿಗೆ ನೂರಾರು ಜನರು ಬರುತ್ತಾರೆ. ಗುಣಮಟ್ಟದ ಆಹಾರ ನೀಡುವುದರ ಜತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು.
ಡಾ. ಹರ್ಷಬಸಪ್ಪ, ಡಾ.ರಜಿತ್, ಡಾ.ಜಯಶೀಲನ್, ಡಾ.ಮಂಜುನಾಥ್, ಡಾ.ಶಶಿಕಾಂತ್, ಇಂಜಿನಿಯರ್‌ಗಳಾದ ಸ್ವರೂಪ್, ಧರ್ಮೇಂದ್ರ, ಪಿಆರ್‌ಒಗಳಾದ ವಾಣಿಮೋಹನ್, ಚಂಪಕಮಾಲ, ಹಿರಿಯ ಶುಶ್ರೂಷಕ ಗುರುಮೂರ್ತಿ, ಲ್ಯಾಬ್ ಶಂಕರ್ ಹಾಜರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net