ಪಾಲಕರೇ ಮಕ್ಕಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣ:ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ವಿಷಾದ

ನಿರಂತರ ಫೌಂಡೇಶನ್ ಮತ್ತು ಅಭಿರುಚಿ ಪ್ರಕಾಶನದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಾರ್ಟಿ’ ನಾಟಕ ಕೃತಿ ಬಿಡುಗಡೆಗೊಳಿಸಲಾಯಿತು. ಜಯಂತ್ ಕಾಯ್ಕಿಣಿ, ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ, ಸತೀಶ್ ತಿಪಟೂರು, ಚಿದಂಬರರಾವ್ ಜಂಬೆ, ಡಿ.ಎಸ್.ಚೌಗಲೆ, ಪ್ರಸಾದ್ ಕುಂದೂರು, ಅಭಿರುಚಿ ಗಣೇಶ್ ಇದ್ದರು.
ನಿರಂತರ ಫೌಂಡೇಶನ್ ಮತ್ತು ಅಭಿರುಚಿ ಪ್ರಕಾಶನದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಾರ್ಟಿ’ ನಾಟಕ ಕೃತಿ ಬಿಡುಗಡೆಗೊಳಿಸಲಾಯಿತು. ಜಯಂತ್ ಕಾಯ್ಕಿಣಿ, ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ, ಸತೀಶ್ ತಿಪಟೂರು, ಚಿದಂಬರರಾವ್ ಜಂಬೆ, ಡಿ.ಎಸ್.ಚೌಗಲೆ, ಪ್ರಸಾದ್ ಕುಂದೂರು, ಅಭಿರುಚಿ ಗಣೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬದಲಾದ ಜೀವನ ಶೈಲಿಯಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿವೆ
  • ನಗರ ಪ್ರದೇಶದಲ್ಲಿ ಬದುಕುತ್ತಿರುವ ಸಭ್ಯ ಸಮಾಜದ ಜೀವನ ಶೈಲಿಯನ್ನು ನೋಡಿ ತಳ ಸಮುದಾಯ ಶಪಿಸುತ್ತಿದೆ
ಮೈಸೂರು:ಸಾಮಾಜಿಕ ಜೀವನ ಶೈಲಿ ಬದಲಾಗುತ್ತಿದ್ದು, ತಂದೆ, ತಾಯಿಗಳೇ ಮಕ್ಕಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ವಿಷಾದ ವ್ಯಕ್ತಪಡಿಸಿದರು.
ನಿರಂತರ ಫೌಂಡೇಷನ್ ಮತ್ತು ಅಭಿರುಚಿ ಪ್ರಕಾಶನದಿಂದ ರಂಗಾಯಣದ ವನರಂಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿರುವ ( ಮಹೇಶ್‌ಎಲಕುಂಚವಾರ್ ರಚಿತ ) ಮರಾಠಿ ನಾಟಕದ ‘ಪಾರ್ಟಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ನಗರ ಪ್ರದೇಶದಲ್ಲಿ ಬದಲಾದ ಜೀವನ ಶೈಲಿಯಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ನಗರ, ಪಟ್ಟಣದಲ್ಲಿ ನೆಲೆಸಿರುವ ಇಂದಿನ ಕಾಲದ ಯುವಜನರು ಮನೆಯಲ್ಲಿಯೂ ಐರನ್ ಮಾಡಿದ ಬಟ್ಟೆ ಧರಿಸಿ ಚಪ್ಪಲಿ ಮೆಟ್ಟಿ ಓಡಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ತಂದೆ, ತಾಯಿ ಮೇಲೆಯೇ ರೇಗಾಡುವುದು ನಡೆಯುತ್ತಿದೆ. ಹೀಗಾಗಿ ತಂದೆ, ತಾಯಿಗಳೇ ಮಕ್ಕಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಸಮುದಾಯ ಜಾತ್ರೆ, ಒಕ್ಕಣೆ ಸಮಯದಲ್ಲಿ ನಾನಾ ವೇಷ ಧರಿಸಿ, ಬೀದಿಬೀದಿಗಳಲ್ಲಿ ನೃತ್ಯ ಮಾಡುತ್ತಾರೆ. ಅವರು ಸಭ್ಯ ಸಮಾಜದ ಮೇಲಿರುವ ಕೋಪವನ್ನು ನಾಟಕದ ಪಾತ್ರಗಳ ಅಭಿನಯಿಸಿ ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಾರೆ. ಸಭ್ಯ ಸಮಾಜ ಅವರನ್ನು ಮುಖ್ಯವಾಹಿನಿಯಿಂದ ದೂರವಿಟ್ಟಿರುವ ಕೋಪವನ್ನು ಅವರು ಹಾಗೇ ವ್ಯಕ್ತಪಡಿಸುತ್ತಾರೆ ಎಂದರು.
ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದಿರುವ ತಳಸಮುದಾಯ ಯುವಕರು, ನಗರ ಪ್ರದೇಶದಲ್ಲಿ ಬದುಕುತ್ತಿರುವ ಸಭ್ಯ ಸಮಾಜದ ಜೀವನ ಶೈಲಿಯನ್ನು ನೋಡಿ, ತಮ್ಮನ್ನು ಶಿಕ್ಷಣದಿಂದ ವಂಚಿಸಿ, ಇವರು ಮಾತ್ರ ಸುಖ ಜೀವನ ನಡೆಸುತ್ತಿದ್ದಾರೆ ಎಂದು ಮನಸ್ಸಿನಲ್ಲೇ ಶಪಿಸುತ್ತಾ, ವ್ಯವಸ್ಥೆ ವಿರುದ್ಧ ಸೆಟೆದು ನಿಲ್ಲಲು ಪ್ರಯತ್ನಿಸುತ್ತಾರೆ. ಇಂತಹ ಪ್ರಸಂಗಗಳನ್ನು ಪಾರ್ಟಿ ನಾಟಕದಲ್ಲಿ ಬೆಳಕು ಚೆಲ್ಲಿದೆ ಎಂದು ವಿವರಿಸಿದರು.
ಮಹೇಶ್ ರಚನೆಯ ಮರಾಠಿ ನಾಟಕಗಳಲ್ಲಿ ಅನಗತ್ಯ ಪದಗಳನ್ನು ಸೇರಿಸದೆ ಆ ಸಂಭಾಷಣೆಗೆ ಎಷ್ಟು ಪದಗಳು ಅವಶ್ಯವೂ ಅಷ್ಟನ್ನು ಮಾತ್ರ ಸೇರಿಸುತ್ತಿದ್ದರು. ಮನುಷ್ಯನ ನಿತ್ಯ ಜೀವನದಲ್ಲಿ ಅದಾಗಲೇ ನಾಟಕಕ್ಕೆ ಬಂದಾಗಿದೆ. ಇದೀಗ ಅಕ್ಷರ ರೂಪದಲ್ಲಿ ಬಂದಿರುವ ನಾಟಕ ಸಮಾಜದ ಪ್ರತಿಬಿಂಬ ಆಗಿದೆ ಎಂದರು.
ಹಿರಿಯ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿ, ನಗರದ ಪ್ರದೇಶದಲ್ಲಿ ಬದುಕುತ್ತಿರುವ ಸಭ್ಯ ಸಮಾಜ ಒಂಟಿತನದಿಂದ ಬಳಲುತ್ತಿದೆ. ಸಭ್ಯ ಸಮಾಜ ಹಾವ ಭಾವಗಳನ್ನು ಗಮನಿಸುವ ತಳಸಮುದಾಯ ನಮ್ಮ ಈ ವ್ಯವಸ್ಥೆಯಿಂದ ದೂರವಿಟ್ಟ ಸಮುದಾಯವನ್ನು ಸದಾ ಶಪಿಸುತ್ತಿರುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ನಾಟಕವನ್ನು ಯಥಾವತ್ ಕನ್ನಡಕ್ಕೆ ಅನುವಾದಿಸಿರುವ ಪ್ರಸಾದ್ ಕುಂದೂರು, ಕನ್ನಡದ ನೆಲಕ್ಕೆ ಹೊಂದುವಂತೆ ಅನುವಾದಿಸಿರುವುದು ಈ ನಾಟಕದ ವಿಶೇಷ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ, ನಾಟಕಕಾರ ಡಿ.ಎಸ್.ಚೌಗಲೆ, ಅನುವಾದಕ ಪ್ರಸಾದ್ ಕುಂದೂರು, ಪ್ರಕಾಶಕ ಅಭಿರುಚಿ ಗಣೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net