ವಿಶ್ವಶಾಂತಿ ಶಿಕ್ಷಣ ಸಂಸ್ಥೆ ಉಳಿಸಿ

ದಲಿತ ಮುಖಂಡ ಹರಿಹರ ಆನಂದಸ್ವಾಮಿ
ದಲಿತ ಮುಖಂಡ ಹರಿಹರ ಆನಂದಸ್ವಾಮಿ
Published on
ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಶೈಕ್ಷಣಿಕ ಏಳಿಗೆಗಾಗಿ 1964ರಲ್ಲಿ ಆರಂಭಗೊಂಡ ವಿಶ್ವಶಾಂತಿ ಶಿಕ್ಷಣ ಸಂಸ್ಥೆ ಇದೀಗ ಅಧೋಗತಿ ತಲುಪಿದ್ದು, ಸಂಸ್ಥೆಯ ಆಡಳಿತ ವ್ಯವಸ್ಥೆ, ಆಸ್ತಿಪಾಸ್ತಿಗಳು ಅನ್ಯರ ಪಾಲಾಗುತ್ತಿದೆ. ಶೀಘ್ರವೇ ಸರ್ಕಾರ ತನ್ನ ಸುಪರ್ದಿಗೆ ಪಡೆದು ಸಂಸ್ಥೆಯನ್ನು ಉಳಿಸುವತ್ತ ಗಮನಹರಿಸಬೇಕೆಂದು ದಲಿತ ಮುಖಂಡ ಹರಿಹರ ಆನಂದಸ್ವಾಮಿ ಒತ್ತಾಯಿಸಿದರು.
ಈ ಭಾಗದ ಶಿಕ್ಷಣ ಸಂತನೆಂದೇ ಖ್ಯಾತಿ ಪಡೆದ ಲಕ್ಕಪ್ಪ ಸ್ವಾಮೀಜಿ ಸಂಸ್ಥೆಯನ್ನು ಸ್ಥಾಪಿಸಿದ್ದರು. 1964ರಲ್ಲಿ ಅಂದಿನ ರಾಜ್ಯ ಸರ್ಕಾರದ ಸಚಿವರಾದ ಮಲ್ಲಿಕಾರ್ಜುನಸ್ವಾಮಿ, ಬಸವಲಿಂಗಯ್ಯ ಮುಂತಾದವರು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ರತ್ನಪುರಿ ಗ್ರಾಮದಲ್ಲಿ 40 ಎಕರೆ ಭೂಮಿ, ಪಕ್ಕದ ಎಚ್.ಡಿ.ಕೋಟೆ ತಾಲೂಕಿನ ಬಗ್ಗವಾಡಿ ಗ್ರಾಮದಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ 200 ಎಕರೆ ಭೂಮಿ ಮತ್ತು ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ಮುಂಭಾಗ 1.25 ಎಕರೆ ಭೂಮಿಯನ್ನು ಲೀಸ್ ಆಧಾರದಡಿ ನೀಡಲಾಗಿತ್ತು. ಆದರೆ ವರ್ಷದ ಹಿಂದೆ ಸ್ವಾಮೀಜಿ ಕಾಲಾನಂತರ ಶಿಕ್ಷಣ ಸಂಸ್ಥೆ ಅವನತಿಯತ್ತ ಸಾಗಿದೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸ್ಥಳೀಯ ಮುಖಂಡರಿಗೆ ಸ್ಥಾನವಿಲ್ಲ. ಸ್ವಾಮೀಜಿ ಕುಟುಂಬದವರ ಹಸ್ತಕ್ಷೇಪ ನಡೆದಿದ್ದು, ಶಿಕ್ಷಣ ಕುಸಿಯುತ್ತಿದ್ದು, ಶೋಷಿತ ಸಮುದಾಯಕ್ಕೆ ಆಶಾಕಿರಣವಾಗಿದ್ದ ಈ ಸಂಸ್ಥೆ ಅವನತಿಯತ್ತ ಸಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯ ಅವನತಿಯ ಕುರಿತು ಜಿಲ್ಲಾ ಉಸ್ತಿವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತರಲಾಗಿದ್ದು, ಸಂಸ್ಥೆಯನ್ನು ಸರ್ಕಾರದ ಸುಪರ್ದಿಗೆ ಪಡೆದು ಶೋಷಿತ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಕ್ರಮವಹಿಸಲು ಒತ್ತಾಯಿಸಲಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹದೇವಸ್ವಾಮಿ, ತಟ್ಟೆಕೆರೆ ನಾಗರಾಜು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net