‘ಶಾಸ್ತ್ರ ಗೂಳಿ’ ಎಂಬ ಬಿರುದು: ದೇಶಾದ್ಯಂತ ಇದ್ದ ವಿವಿಧ ರಂಗದ ಪ್ರಸಿದ್ಧ ಪಂಡಿತರನ್ನು ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಹ್ವಾನಿಸಿ, ಸಕಲ ಗೌರವಾದರದಿಂದ ಪೋಷಿಸುತ್ತಿದ್ದರು. ಜ್ಞಾನದ ಹರಿವು ಎಂದರೆ ಅದು ನಿರಂತರವಾಗಿ ಚರ್ಚೆಗೆ ಒಳಗಾಗುತ್ತಲೇ ಇರಬೇಕು ಎಂಬ ಮಹತ್ವದ ಧ್ಯೇಯ ಹೊಂದಿದ್ದರು. ಆಗಾಗ್ಗೆ ಪಂಡಿತರ ವಿದ್ವತ್ ಸಭೆಗಳು ನಡೆಯುತ್ತಿದ್ದವು. ಅದರಲ್ಲಿ ಬಾಳಾಚಾರ್ಯರೇ ಅಗ್ರ ಪಂಕ್ತಿಯ ವಿದ್ವನ್ಮಣಿ. ಹಲವು ವಿದ್ವಾಂಸರ ಸವಾಲನ್ನು ಸ್ವೀಕರಿಸಿ, ತರ್ಕ, ಅಲಂಕಾರ, ಮೀಮಾಂಸೆ ಮತ್ತು ಖಂಡನೆಗಳನ್ನು ಸಮರ್ಥವಾಗಿ ಪ್ರತಿಪಾದಿಸಿ ವಿಜಯಶಾಲಿ ಆಗುತ್ತಿದ್ದರು. ಯಾವುದೇ ಭಯ, ಅಂಜಿಕೆ ಇಲ್ಲದೇ ವಾಕ್ಯಾರ್ಥಗಳನ್ನು ಮಾಡಿ, ಹಲವು ವಿದ್ವಾಂಸರನ್ನು ಸೋಲಿಸುತ್ತಿದ್ದ ಕಾರಣ ಅವರಿಗೆ ‘ಶಾಸ್ತ್ರ ಗೂಳಿ’ ಎಂಬ ಬಿರುದನ್ನು ಮಹಾರಾಜರೇ ಪ್ರದಾನ ಮಾಡಿದ್ದರು. ವೀರಾವೇಶದಿಂದ ಬಂದ ಗೂಳಿಯೊಂದನ್ನು ತಮ್ಮ ತೋಳ್ಬಲದಿಂದ ಮಣಿಸಿದ್ದ ಕಾರಣ ಇವರಿಗೆ ಆ ಹೆಸರು ಅನ್ವರ್ಥವಾಗಿತ್ತು ಎಂದೂ ಕೆಲವರು ಹೇಳುತ್ತಾರೆ. ಒಟ್ಟಾರೆ ವಿದ್ವತ್ತು, ಜ್ಞಾನಬಲದಿಂದ ಅವರು ಅತ್ಯಂತ ಬಲಶಾಲಿ, ಜ್ಞಾನಶಾಲಿ ಆಗಿದ್ದರು ಎಂಬುದಕ್ಕೆ ಹಲವು ಆಧಾರಗಳೇ ಇವೆ.