ಸರ್ವೋದಯ ಪಕ್ಷದಿಂದ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಪರ್ಧೆಗೆ ನಿರ್ಧಾರ
ಮೈಸೂರು ನಗರದ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ರಾಜ್ಯ ರೈತ ಸಂಘ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ನೇತ್ರಾವತಿ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜ್ಯ ರೈತ ಸಂಘದ ರಾಜಕೀಯ ಶಕ್ತಿ ಹೆಚ್ಚಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದ ಹುಣಸೂರು ರಸ್ತೆಯ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ರಾಜ್ಯ ರೈತ ಸಂಘ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಭೆ ಹಾಗೂ ಮೈಸೂರು ತಾಲೂಕು ಸಮಿತಿ ಪುನರ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ತಲಾ 1 ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು. ಚುನಾವಣೆ ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.
ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದು, ಈ ಒಪ್ಪಂದ ರೈತರ ಕೊರಳಿಗೆ ಉರುಳಾ ಗಲಿದೆ. ಒಪ್ಪಂದ ವಿರೋಧಿಸಿ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇಲವಾಲದಲ್ಲಿ ರೈತ ನಾಯಕ, ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಮೆ ಅನಾವರಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು. ರಾಜಕೀಯ ಪಕ್ಷವೊಂದು ಪುಟ್ಟಣ್ಣಯ್ಯ ಪ್ರತಿಮೆಯ ಅನಾವರಣಕ್ಕೆ ತಡೆಯೊಡ್ಡುತ್ತಿದೆ. ಕೆಲವರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕು ಎಂದರೆ ಮತ್ತೆ ಕೆಲವರು ವಾಲ್ಮೀಕಿ ಪ್ರತಿಮೆ ನಿರ್ಮಿಸುತ್ತೇವೆ ಎಂದು ಗೊಂದಲ ಸೃಷ್ಟಿಸಿದ್ದಾರೆ. ಆದರೆ, ಗ್ರಾಮಸ್ಥರ ವಿರೋಧವಿಲ್ಲ ಎಂದರು.
ರಾಜ್ಯ ರೈತ ಸಂಘದ ಪ್ರತಿಭಟನೆಯ ಪರಿಣಾಮ ತಹಸಿಲ್ದಾರ್ ಸರ್ಕಾರಿ ಜಾಗದಲ್ಲಿ ಅನಾವರಣಗೊಳಿಸಲು ಅನುಮತಿ ನೀಡಿದ್ದಾರೆ. ಆದರೆ, ಅಲ್ಲಿಯೂ ಸಾಧ್ಯವಾಗಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಈ ವಿಚಾರವನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ಮತ್ತೊಮ್ಮೆ ತರಲಾಗುವುದು ಎಂದರು.
ರಾಜ್ಯ ರೈತ ಸಂಘಟನೆಯ ಕಾರ್ಯಕರ್ತರ ಬೌದ್ಧಿಕ ಮಟ್ಟ ಹೆಚ್ಚಿಸಿ ಸೈದ್ಧಾಂತಿಕ ವಿಚಾರಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಒಂದೊಂದು ತಾಲೂಕುಗಳಿಂದ 10 ಜನರನ್ನು ಆಯ್ಕೆ ಮಾಡಿ 100 ರಿಂದ 150 ಜನರಿಗೆ ಶಿಬಿರ ನಡೆಸಲಾಗುವುದು. ಸದ್ಯದಲ್ಲಿ ಶಿಬಿರ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ರೈತ ಸಂಘದ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ನೇತ್ರಾವತಿ ಹಾಗೂ ಇತರರು ಇದ್ದರು.