ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರಂಭದಲ್ಲಿ ಪ್ರೊ.ರಾಮಚಂದ್ರ ಜಿ. ಭಟ್, ಡಾ.ಬಿ. ನಂಜುಂಡಸ್ವಾಮಿ, ಡಾ. ಶಿವಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಎಸ್. ಅಹಲ್ಯಾ, ಡಾ.ಸಿ.ಶಿವರಾಜು ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಜ್ಞಾನದಾಹವನ್ನು ಸಂಸ್ಕೃತ ಭಾಷೆ ನೀಗಿಸಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಶಿವರಾಜು ಅಭಿಪ್ರಾಯಪಟ್ಟರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಜೆಎಸ್‌ಎಸ್ ಸಂಸ್ಥೆ ಸಂಶೋಧನಾ ಕೇಂದ್ರ ತೆರೆದು ಸಂಸ್ಕೃತ ಗ್ರಂಥ ಭಂಡಾರವನ್ನು ಸಂರಕ್ಷಿಸುವ ಕಾರ್ಯವನ್ನು ಜೆಎಸ್‌ಎಸ್ ಕೈಗೊಂಡಿರುವುದು ಅಭಿಮಾನದ ಸಂಗತಿ ಎಂದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನ ಭಾಷೆಗಳಲ್ಲಿ ಸಂಸ್ಕೃತ ಶ್ರೇಷ್ಠವಾಗಿದ್ದು ಭಾರತೀಯ ಭಾಷೆಗಳ ಜತೆಗೆ ಯೂರೋಪಿಯನ್ ಭಾಷೆಗಳಿಗೂ ಸಂಸ್ಕೃತ ತಾಯಿ ಬೇರಾಗಿದೆ. ವ್ಯಾಕರಣ ಶುದ್ಧತೆಯನ್ನು ಸಂಸ್ಕೃತ ಭಾಷೆ ಕಲಿಸುತ್ತದೆ. ಜತೆಗೆ ಪ್ರಾಚೀನ ಗ್ರಂಥಗಳೆಲ್ಲವೂ ಸಂಸ್ಕೃತದಿಂದ ರಚಿತವಾಗಿವೆ. ಸಂಸ್ಕೃತ ಸಂವಹನ ಭಾಷೆಯಾಗಿದೆ. ತರಗತಿಯಲ್ಲಿ ಮಕ್ಕಳು ಶ್ರದ್ಧೆ ಹಾಗೂ ಆಸಕ್ತಿಯಿಂದ ಸಂಸ್ಕೃತ ಭಾಷೆಯನ್ನು ಕಲಿತು ಶ್ರೇಷ್ಠ ವಿದ್ವಾಂಸರಾಗಲು ಸಾಧ್ಯವಿದೆ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಅಹಲ್ಯಾ ಮಾತನಾಡಿ, ಶ್ರಾವಣಮಾಸ ಶ್ರೇಷ್ಠವಾಗಿದ್ದು, ಈ ಮಾಸದಲ್ಲಿ ಸಂಸ್ಕೃತೋತ್ಸವ ಎಲ್ಲೆಡೆ ಆಚರಿಸಲಾಗುತ್ತಿದೆ. ಸಂಸ್ಕೃತ ಜ್ಞಾ ಭಾಷೆಯು ಹೌದು ಅನ್ನ ಭಾಷೆಯು ಹೌದು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರ ಜಿ. ಭಟ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಕೃತ ವಿಶ್ವ ಭಾಷೆಯಾಗಿದ್ದು, ಸಮಸ್ತ ಮಾನವ ಕುಲದ ಮಾತೃ ಭಾಷೆಯಾಗಿದೆ. ಜಗತ್ತಿನ ಭಾಷೆಗಳಲ್ಲಿ ಸಂಸ್ಕೃತ ಅಗ್ರಮಾನ್ಯತೆಯನ್ನು ಪಡೆದಿದೆ. ಸಂಸ್ಕೃತವು ಸಂಸ್ಕಾರಗುಣಸಂಹಿತೆ ಮತ್ತು ಜ್ಞಾನಭಂಡಾರದ ಸತ್ಯ ಹೊಂದಿದೆ. ಈ ಭಾಷೆ ಕಲಿಯುವುದರಿಂದ ಸತ್ಯದ ದರ್ಶನವಾಗುತ್ತದೆ ಎಂದು ತಿಳಿಸಿದರು.
ಆಯುರ್ವೇದ ವೈದ್ಯ ಡಾ.ಬಿ. ನಂಜುಂಡಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮೈಸೂರು ಸಂಸ್ಥಾನ ಸಂಸ್ಕೃತ ಭಾಷೆ ಮತ್ತು ಸಾಹಿತ್ಯಕ್ಕೆ ಗುರುತರವಾದ ಕೊಡುಗೆ ನೀಡಿದೆ ಎಂದರು.
ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಶಿವಕುಮಾರಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸುತ್ತೂರು ಮಠವು ಸಂಸ್ಕೃತ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೆ ಕೊಡುಗೆಯನ್ನು ನೀಡಿರುವುದನ್ನು ಸ್ಮರಿಸಿದರು.
ಸಂಸ್ಕೃತೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆ, ಪದಸ್ಮರಣೆ ಮತ್ತು ಸಂಸ್ಕೃತದಲ್ಲಿ ಜಾಹೀರಾತು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ನಂತರ ಶಿಶುಪಾಲವಧಾ ನಾಟಕ ಪ್ರದರ್ಶನಗೊಂಡಿತು.