ಸಮಾಜಕ್ಕೆ ಅರಿವಿನ ಬೆಳಕು ನೀಡಿದ ಸಂತ ರಾಜೇಂದ್ರ ಶ್ರೀ

ಗಣ್ಯರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರೊ.ಎ.ಪಿ.ಜ್ಞಾನಪ್ರಕಾಶ್, ಬಿ.ಎನ್.ವೀಣಾ, ಡಾ.ಕುಮಾರ ಬೆಳಲೆ, ಡಾ.ಆರ್.ಎಚ್.ಪವಿತ್ರಾ, ಡಾ.ರೇಚಣ್ಣ, ಗುರುಪಾದಸ್ವಾಮಿ, ಆರ್.ಎಸ್. ಕುಮಾರ್ ಇದ್ದರು.
ಗಣ್ಯರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರೊ.ಎ.ಪಿ.ಜ್ಞಾನಪ್ರಕಾಶ್, ಬಿ.ಎನ್.ವೀಣಾ, ಡಾ.ಕುಮಾರ ಬೆಳಲೆ, ಡಾ.ಆರ್.ಎಚ್.ಪವಿತ್ರಾ, ಡಾ.ರೇಚಣ್ಣ, ಗುರುಪಾದಸ್ವಾಮಿ, ಆರ್.ಎಸ್. ಕುಮಾರ್ ಇದ್ದರು.
Published on
ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಸಮಾಜಕ್ಕೆ ಎಂದೆಂದಿಗೂ ಅರಿವಿನ ಬೆಳಕಾಗಿ ಮಾರ್ಗದರ್ಶನ ನೀಡಿದ ಮಹಾನ್ ಸಂತ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಬಣ್ಣಿಸಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು (ಸ್ವಾಯತ್ತ) ಹಾಗೂ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ರಾಜೇಂದ್ರ ಶ್ರೀಗಳು ಸಮಾಜಕ್ಕೆ ಸದಾ ಜ್ಞಾನ ಮತ್ತು ಅರಿವಿನ ಬೆಳಕು ನೀಡಿದವರು. ಗ್ರಾಮೀಣ ಪ್ರದೇಶಗಳ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ, ಶಿಕ್ಷಣದ ಮೂಲಕ ಅವರ ಬದುಕಿಗೆ ಹೊಸ ದಿಕ್ಕು ನೀಡಿದರು. ಅಕ್ಷರ ದಾಸೋಹ ಹಾಗೂ ಅನ್ನ ದಾಸೋಹದ ಮೂಲಕ ಸಮಾಜ ಸೇವೆಯ ಹೊಸ ಪರಂಪರೆಯನ್ನು ಬೆಳೆಸಿದರು. ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಸುತ್ತೂರು ಶ್ರೀಮಠದ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಬಿ.ಎನ್.ವೀಣಾ ಮಾತನಾಡಿ, ರಾಜೇಂದ್ರ ಶ್ರೀಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಬಸವಣ್ಣನವರ ಆಶಯದಂತೆ ಆರೋಗ್ಯಕರ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದಾಗ ಸಾಧನೆ ಸಾಧ್ಯ. ಶೈಕ್ಷಣಿಕ ಜ್ಞಾನದ ಜತೆಗೆ ಕೌಶಲಾಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕುಮಾರ ಬೆಳಲೆ ಮಾತನಾಡಿ, ರಾಜೇಂದ್ರ ಶ್ರೀಗಳು ಜ್ಞಾನವನ್ನು ಎಲ್ಲೆಡೆ ಪಸರಿಸಿದ ದಿವ್ಯ ಮಹಾನುಭಾವರು. ಸುತ್ತೂರು ಶ್ರೀಮಠವು ಕರುಣೆ, ಅಹಿಂಸೆ ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಿದೆ ಎಂದರು.
ರಾಜೇಂದ್ರ ಶ್ರೀಗಳನ್ನು ತಾಯಿಯ ಹೃದಯವಿರುವ ತಂದೆಯಂತೆ ಸಮಾಜದ ದುರ್ಬಲ ವರ್ಗದವರನ್ನು ಕಾಳಜಿಯಿಂದ ನೋಡಿಕೊಂಡ ಮಹಾನ್ ಮಾನವತಾವಾದಿ ಎಂದು ಸ್ಮರಿಸಿದ ಅವರು, ಉಚಿತ ಪ್ರಸಾದ ನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲೋಕಕಲ್ಯಾಣಕ್ಕೆ ಶ್ರಮಿಸಿದ್ದರು ಎಂದರು.
ಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರಾ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಚಟುವಟಿಕೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದರು.
ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾವು ಜೆಎಸ್‌ಎಸ್ ಉತ್ಪನ್ನ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ, ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗುರುಪಾದಸ್ವಾಮಿ, ಕಾರ್ಯಕ್ರಮದ ಸಂಯೋಜಕ ಆರ್.ಎಸ್.ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net