ಬೆಟ್ಟದ ಅಭಿವೃದ್ಧಿ ಕಾಮಗಾರಿ ವರವೋ, ಮಾರಕವೋ?

 ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ
Published on
ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ವರವೋ ಅಥವಾ ಮಾರಕವೋ ಎಂಬ ಚರ್ಚೆ ತೀವ್ರಗೊಂಡಿದೆ.
ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾಡಳಿತದಿಂದ ಚಾಲನೆ ನೀಡಿರುವುದು ಪರಿಸರವಾದಿಗಳು ಹಾಗೂ ಬೆಟ್ಟದಲ್ಲಿ ಸಹಜತೆಯನ್ನು ಬಯಸುವವರ ವಿರೋಧಕ್ಕೆ ಗುರಿಯಾಗಿದೆ.
ಪಾರಂಪರಿಕತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆಯೂ ನಡೆಯುತ್ತಿದೆ. ಬೆಟ್ಟದ ನಿವಾಸಿಗಳಿಂದಲೂ ವಿರೋಧ ವ್ಯಕ್ತವಾಗಿದ್ದು, ಅವರೂ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆ ಅಥವಾ ಜಿಲ್ಲಾಡಳಿತದಿಂದ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಕೆಲಸ ನಡೆದಿಲ್ಲ. ಅಲ್ಲಿ ಕೈಗೊಳ್ಳುತ್ತಿರುವುದು ಶಾಶ್ವತವಾದ ಕಾಮಗಾರಿಯೇ ಅಥವಾ ಯಾವ ಸ್ವರೂಪದ್ದು ಎಂಬುದನ್ನು ತಿಳಿಸುವ ಕಾರ್ಯವೂ ಆಗಿಲ್ಲ.
‘ಚಾಮುಂಡಿ ಬೆಟ್ಟದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿವೆ. ದೇವಸ್ಥಾನದ ಸಮೀಪದಲ್ಲೇ ಶಾಶ್ವತ ವೇದಿಕೆ ನಿರ್ಮಿಸಲು ಅಗೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮವಾಗಿದ್ದು, ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುವ ವಲಯವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವುದೇ ಸಮರ್ಪಕ ವೈಜ್ಞಾನಿಕ ಅನುಮೋದನೆ, ಪರಿಸರ ಅನುಮತಿ ಹಾಗೂ ಆಧ್ಯಾತ್ಮಿಕ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದು ಅಪಾಯಕಾರಿ’ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.
ಬೆಟ್ಟಕ್ಕೆ ಹೆಚ್ಚುತ್ತಿರುವ ಭಕ್ತರ ಅನುಕೂಲಕ್ಕಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆಯೇ ಹೊರತು, ಮಾಡಿಕೊಡಲಾಗುತ್ತಿರುವ ಅನುಕೂಲವಾದರೂ ಏನು ಎಂಬುದನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲದಿರುವುದು ಗೊಂದಲ, ಅನುಮಾನಗಳಿಗೆ ಹಾಗೂ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಬೆಟ್ಟವನ್ನು ಬೆಟ್ಟವನ್ನಾಗಿ ಉಳಿಸಿಕೊಳ್ಳಬೇಕು ಎಂಬುದು ಪರಿಸರವಾದಿಗಳ ಆಗ್ರಹ. ಈ ನಡುವೆಯೇ, ಜೆಸಿಬಿ ಮೊದಲಾದ ಯಂತ್ರಗಳು ಗರ್ಜಿಸುತ್ತಿರುವುದು ಕಾಂಕ್ರೀಟ್ ಬೆಟ್ಟವನ್ನಾಗಿ ಮಾರ್ಪಾಡಾಗಿಸುವ ಆತಂಕ ಅವರದಾಗಿದೆ. ಮೈಸೂರು ರಾಜಮನೆತನದಿಂದಲೂ ವಿರೋಧ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net