ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಅವರು ಇಹಲೋಕ ತ್ಯಜಿಸಿ ಆರು ದಿನಗಳಾಗಿವೆ. ಆದರೂ, ಅವರ ಮೇಲಿನ ಪ್ರೀತಿ, ಒಲವು ಕಡಿಮೆಯಾಗಿಲ್ಲ. ಅದು ಶಾಶ್ವತವಾಗಿ ಅವರ ಅಭಿಮಾನಿಗಳ ಮನದಲ್ಲಿ ಬೇರೂರಿದೆ. ಅದಕ್ಕೆ ಸಾಕ್ಷಿ ಎಂಬುವಂತೆ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ನಿತ್ಯವೂ ಅಭಿಮಾನಿಗಳು ಭೇಟಿ ನೀಡುವ ಮೂಲಕ ಹಾಡುಹಕ್ಕಿಗೆ ನಮನ ಸಲ್ಲಿಸುತ್ತಿದ್ದಾರೆ.
ಜು.11ರಂದು ನಿಧನರಾದ ಜಾನಕಿ ಅವರ ಅಂತ್ಯಕ್ರಿಯೆ ಜು.12ರಂದು ಸಂಜೆ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿರುವ ಅಭಿಮಾನಿ ನವೀನ್ ಅವರ ತೋಟದಲ್ಲಿ ನಡೆದಿದೆ.
ಅವರು ಪಂಚಭೂತಗಳಲ್ಲಿ ಲೀನರಾದ ನಂತರವೂ ಅಭಿಮಾನಿಗಳ ದಂಡು ಹರಿದು ಬರುವುದು ನಿಂತಿಲ್ಲ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ದಿನವೂ ಅಭಿಮಾನಿಗಳು ಇಲ್ಲಿಗೆ ದೌಡಾಯಿಸಿ ಕಂಬನಿ ಮಿಡಿಯುತ್ತಿದ್ದಾರೆ. ಈಗ ಈ ತಾಣ ಅಭಿಮಾನಿಗಳ ಪಾಲಿಗೆ ಪುಣ್ಯಕ್ಷೇತ್ರವಾಗಿ ಪರಿವರ್ತನೆಗೊಂಡಿದೆ.
ಈ ಸ್ಥಳವನ್ನು ಸ್ಮಾರಕ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಅಲ್ಲಿಯವರೆಗೆ ಚಿತಾ ಭಸ್ಮವನ್ನು ಸುರಕ್ಷಿತವಾಗಿ ಸಂರಕ್ಷಿಸಲು ಅದರ ಸುತ್ತ ತಾತ್ಕಾಲಿಕ ಕಟ್ಟೆ ನಿರ್ಮಿಸಿ, ಮಳೆ-ಗಾಳಿಯಿಂದ ಹಾನಿಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಎಸ್.ಜಾನಕಿ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಆಯೋಜನೆಗೂ ಚಿಂತಿಸಲಾಗಿದೆ. ಜಾನಕಿ ಅವರು ಅಕಾಲಿಕವಾಗಿ ನಿಧನರಾದ ಪುತ್ರ, ಗಾಯಕ ಮುರಳಿಕೃಷ್ಣ ಅವರ ಸ್ಮರಣಾರ್ಥ ಸಂಗೀತ ಸಂಜೆ ಏರ್ಪಡಿಸುವ ಆಸೆ ಹೊಂದಿದ್ದರು. ಡಿ.6ರಂದು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಇದಕ್ಕಾಗಿ ಕಾರ್ಯಕ್ರಮವೂ ನಿಗದಿಯಾಗಿತ್ತು.
ಆದರೆ, ಅಷ್ಟರಲ್ಲಿ ಅವರು ನಿಧನರಾಗಿದ್ದು, ಹೀಗಾಗಿ, ಅವರ ಆಸೆಯನ್ನು ಈಡೇರಿಸಲು ಅವರ ಅಭಿಮಾನಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಿ ಪ್ರಮುಖ ಗಾಯಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಅವರ ಅಭಿಮಾನಿ ನವೀನ್ ತಿಳಿಸಿದ್ದಾರೆ.