ಮೈಸೂರಿನಲ್ಲಿ ಎಸ್.ಜಾನಕಿ ಸ್ಮಾರಕ ನಿರ್ಮಾಣ : ಹಂಸಲೇಖ

 ನಗರದ ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಕಿ ನಮನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾರತಿ ವಿಷ್ಣುವರ್ಧನ್, ಹಂಸಲೇಖ, ಸಾ.ರಾ. ಮಹೇಶ್, ಸಿ.ಎನ್. ಮಂಜೇಗೌಡ, ಬ್ರಹ್ಮಾಂಡ ಗುರೂಜಿ, ಉಮಾ, ಅಪ್ಸರಾ ಹಾಗೂ ಇತರರು ಇದ್ದರು.
ನಗರದ ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಕಿ ನಮನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾರತಿ ವಿಷ್ಣುವರ್ಧನ್, ಹಂಸಲೇಖ, ಸಾ.ರಾ. ಮಹೇಶ್, ಸಿ.ಎನ್. ಮಂಜೇಗೌಡ, ಬ್ರಹ್ಮಾಂಡ ಗುರೂಜಿ, ಉಮಾ, ಅಪ್ಸರಾ ಹಾಗೂ ಇತರರು ಇದ್ದರು.
Published on
ಮೈಸೂರು: ಖ್ಯಾತ ಗಾಯಕಿ ಎಸ್.ಜಾನಕಿ ಅವರ ಸ್ಮಾರಕವನ್ನು 10 ರಿಂದ 15 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ನಗರದ ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಕಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಕಿ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಜಾನಕಿ ಧ್ಯಾನ ಮಂಟಪ ನಿರ್ಮಾಣ ಮಾಡುತ್ತೇವೆ. ಜತೆಗೆ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಜಾನಕಿ ಅವರಿಗೆ ಶ್ರೀಕೃಷ್ಣ ದೇವರ ಬಗ್ಗೆ ಅಪಾರ ನಂಬಿಕೆ ಇತ್ತು. ಅವರ ಅಂತಿಮ ಕ್ಷಣದಲ್ಲೂ ಅವರ ಕೈಯಲ್ಲಿ ಶ್ರೀಕೃಷ್ಣನ ವಿಗ್ರಹ ಇತ್ತು. ಹೀಗಾಗಿ ಕಲ್ಯಾಣ ಮಂಟಪಕ್ಕೆ ಕೃಷ್ಣ ಕಲ್ಯಾಣ ಮಂಟಪ ಎಂದು ಹೆಸರು ಇಡಲಾಗು ವುದು. ಇದರೊಂದಿಗೆ ಜಾನಕಿ ಅಧ್ಯಯನ ಪೀಠ ಸಹ ಮಾಡುತ್ತೇವೆ. ಒಂದೆರಡು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಲಾಗುವು ದು ಎಂದರು.
ಜಾನಕಿ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ನಿರ್ಧರಿಸಿದಾಗ ಕಾರ್ಯಕ್ರಮ ನಡೆಸಿಕೊಡಲು 40 ಗಾಯಕರು ಮುಂದೆ ಬಂದರು. ಇಂದು ಜಾನಕಿ ಅವರ ನೆನಪಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆದಿದೆ. ಜಾನಕಿ ಅವರದ್ದು ಪರಿಪೂರ್ಣ ಜೀವನ, ಪರಿಪೂರ್ಣ ಗಾಯನ. ಜಾನಕಮ್ಮ ಅವರು ತಮ್ಮ ಗಾಯನದ ಮೂಲಕ ಚಿರವಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಕಲೆಗೆ ಯಾವುದೇ ಭಾಷೆ, ಗಡಿಗಳ ಹಂಗು ಇಲ್ಲ. 48 ಸಾವಿರ ಹಾಡುಗಳನ್ನು ಎಸ್.ಜಾನಕಿ ಅವರು ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಅವರು ತಮ್ಮ ಅಂತಿಮ ದಿನಗಳನ್ನು ಮೈಸೂರಿನಲ್ಲಿ ಕಳೆದರು. ಅವರ ಸ್ಮಾರಕ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಜಾನಕಿ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಸ್ಮಾರಕದ ನೀಲನಕ್ಷೆ ತಯಾರಿಸುವಂತೆ ಸೂಚನೆ ನೀಡಿದ್ದಾರೆ. ಈ ಸ್ಮಾರಕ ನಿರ್ಮಾಣವಾದ ನಂತರ ಸ್ಮಾರಕವನ್ನು ನೋಡಲು ದೇಶದ ವಿವಿಧೆಡೆಯಿಂದ ಜನರು ಆಗಮಿಸುತ್ತಾರೆ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ. ಎಸ್. ಜಾನಕಿ ಅವರು ತಮ್ಮ ಅಂತಿಮ ದಿನಗಳನ್ನು ಮೈಸೂರಿನಲ್ಲಿ ಕಳೆದದ್ದು ನಮ್ಮ ಪುಣ್ಯ. ಎಸ್.ಜಾನಕಿ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದರು.
ಎಸ್.ಜಾನಕಿ ಸೊಸೆ ಉಮಾ ಮಾತನಾಡಿ, ನನಗೆ ಧನ್ಯವಾದ ಹೇಳಲು ಪದಗಳೇ ಇಲ್ಲ. ಅಷ್ಟೊಂದು ಪ್ರೀತಿಯನ್ನು ಮೈಸೂರಿನ ಜನರು ನೀಡಿದ್ದಾರೆ. ನವೀನ್ ಹಾಗೂ ಇತರರು ನನ್ನ ಅತ್ತೆಯನ್ನು ಅಂತಿಮ ದಿನಗಳಲ್ಲಿ ಉತ್ತಮವಾಗಿ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಬ್ರಹ್ಮಾಂಡ ಗುರೂಜಿ, ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್, ದ್ವಾರಕೀಶ್ ಪುತ್ರ ಯೋಗೀಶ್, ಗಾಯಕಿ ಶ್ವೇತಾ ಮೋಹನ್, ಎಸ್. ಜಾನಕಿ ಮೊಮ್ಮಗಳು ಅಪ್ಸರಾ, ಅಪ್ಸರಾ ಪತಿ ಗಣೇಶ್, ಜಾನಕಿ ಅವರನ್ನು ಅಂತಿಮ ದಿನಗಳಲ್ಲಿ ನೋಡಿಕೊಳ್ಳುತ್ತಿದ್ದ ನವೀನ್ ಹಾಗೂ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net