ರಫ್ತು ಹೆಚ್ಚಳದಿಂದ ರೂಪಾಯಿ ಮೌಲ್ಯ ವೃದ್ಧಿ

 ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಉದ್ಘಾಟಿಸಿದರು. ಡಾ.ಕೆ.ಬಿ.ಲಿಂಗರಾಜು, ಎಲ್.ಮೇಘಲಾ, ಅರವಿಂದ್ ಭಟ್, ಉಮಾ ಇದ್ದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಉದ್ಘಾಟಿಸಿದರು. ಡಾ.ಕೆ.ಬಿ.ಲಿಂಗರಾಜು, ಎಲ್.ಮೇಘಲಾ, ಅರವಿಂದ್ ಭಟ್, ಉಮಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅಭಿಮತ
  • ತರಬೇತಿ ಕಾರ್ಯಕ್ರಮ
ಮೈಸೂರು: ಆಮದು ಪ್ರಮಾಣ ಹೆಚ್ಚಿಸಿದಷ್ಟೂ ರೂಪಾಯಿಯ ಮೌಲ್ಯ ಡಾಲರ್ ಎದುರು ಕುಸಿಯುತ್ತದೆ. ಇದರ ಪ್ರಮಾಣ ತಗ್ಗಿಸಿ, ರಫ್ತು ಪ್ರಮಾಣ ಹೆಚ್ಚಿಸಿದಾಗ ಮಾತ್ರ ಭಾರತೀಯ ರೂಪಾಯಿ ಮೌಲ್ಯ ವೃದ್ಧಿಯಾಗಲು ಸಾಧ್ಯ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಹೇಳಿದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚೀನಾದಿಂದ ಆಮದು ಮಾಡಿಕೊಳ್ಳುವ ಸೋಲಾರ್ ಪ್ಯಾನಲ್ ಸೇರಿದಂತೆ ಇನ್ನಿತರ ವಿದೇಶಿ ಉತ್ಪನ್ನಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿಲ್ಲ. ಬದಲಾಗಿ ನಾವು ಸ್ಥಳೀಯವಾಗಿ ಉತ್ಪಾದಿಸುವ ಗುಣಮಟ್ಟದ ಪದಾರ್ಥ ಖರೀದಿಸಬೇಕು. ನಮ್ಮ ದೇಶದಿಂದ ರಫ್ತು ಮಾಡುವತ್ತ ಗಮನ ಹರಿಸಬೇಕು. ಚೀನಾ ಉತ್ಪನ್ನಗಳ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಕೊರತೆಯ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ತಿಳಿಸಿದರು.
 ಈ ರಫ್ತು ಅಭಿವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮವು ಆರು ದಿನಗಳ ಕಾಲ ನಿರಂತರವಾಗಿ ನಡೆಯಲಿದ್ದು, ಮಾರುಕಟ್ಟೆಯ ಜಾಗತಿಕ ಸ್ಪರ್ಧೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಸರಿಯಾದ ಬೆಲೆಯಲ್ಲಿ ಹೇಗೆ ರಫ್ತು ಮಾಡಬೇಕೆಂಬುದರ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 3 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ನೀಡಿದ್ದು, ರಿಂಗ್ ರಸ್ತೆಯಲ್ಲಿರುವ ಶೇಷಾದ್ರಿಪುರಂ ಸಂಸ್ಥೆಯ ಪಕ್ಕದಲ್ಲೇ ಮೈಸೂರು ರಫ್ತು ಕೇಂದ್ರ ತಲೆ ಎತ್ತುತ್ತಿದೆ. ರಾಜ್ಯ ಸರ್ಕಾರದ ಕಾರ್ಯದರ್ಶಿಯವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯುದ್ಧದ ಕಾರಣಗಳಿಂದಾಗಿ ಸ್ಟೀಲ್, ಟೈಲ್ಸ್ ಮುಂತಾದ ಸಾಮಗ್ರಿಗಳ ಬೆಲೆ ಹೆಚ್ಚಾಗಿ ಕಾಮಗಾರಿ ಕೊಂಚ ತಡವಾಗಿದ್ದರೂ, ಶೀಘ್ರದಲ್ಲೇ ಇದು ಉದ್ಯಮಿಗಳ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಉದ್ಯಮಿಗಳು ಯಾವುದೇ ಕನ್ಸಲ್ಟೆಂಟ್‌ಗಳು ಅಥವಾ ಏಜೆಂಟರ್ ಬಳಿ ಹೋಗಿ ವಂಚನೆಗೆ ಒಳಗಾಗುವ ಮುನ್ನ, ಇಲಾಖೆಯ ಅಧಿಕಾರಿಗಳು ನೀಡುವ ಅಧಿಕೃತ ಹಾಗೂ ಗೌರವಯುತ ಸೇವೆಯ ಮಾಹಿತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಮಾತನಾಡಿ, ರಫ್ತು ಮಾಡುವುದು ಎಂದರೆ ಕೇವಲ ವಿದೇಶಕ್ಕೆ ಸರಕನ್ನು ಕಳುಹಿಸುವುದಲ್ಲ. ಅದು ನಮ್ಮ ದೇಶದ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಕ್ರಿಯೆ. ಉತ್ಪನ್ನಗಳನ್ನು ಹೇಗೆ ತಯಾರಿಸಬೇಕು, ಹೇಗೆ ಸಾಗಣೆ ಮಾಡಬೇಕು. ನಿಗದಿತ ಸಮಯಕ್ಕೆ ಹೇಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮೈಸೂರು ಕೇವಲ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲದೆ ಕೈಗಾರಿಕೆ, ಕೃಷಿ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ, ಜವಳಿ, ಅಗರಬತ್ತಿ, ಸ್ಯಾಂಡಲ್ ಉತ್ಪನ್ನಗಳು, ಜೇನುತುಪ್ಪ, ಕಾಫಿ, ಮಸಾಲೆ ಪದಾರ್ಥಗಳು, ಆಯುರ್ವೇದ ಉತ್ಪನ್ನಗಳು, ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉತ್ತಮ ರಫ್ತು ಅವಕಾಶ ಹೊಂದಿದೆ ಎಂದು ತಿಳಿಸಿದರು.
ಜಿಲ್ಲೆಯ ಸಾವಿರಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುವ ಸಾಮರ್ಥ್ಯವಿದೆ. ಆದರೆ, ಅವರಿಗೆ ಸರಿಯಾದ ಮಾಹಿತಿ, ತರಬೇತಿ, ದಾಖಲಾತಿಗಳ ಅರಿವು ಮತ್ತು ಮಾರುಕಟ್ಟೆ ಸಂಪರ್ಕದ ಕೊರತೆಯಿದೆ. ಈ ತರಬೇತಿಯು ಅಂತಹ ಕೊರತೆ ನೀಗಿಸಲಿದೆ ಎಂದರು.
ಇ-ಕಾಮರ್ಸ್ ಮೂಲಕ ವಿಶ್ವದ ಯಾವುದೇ ದೇಶಕ್ಕಾದರೂ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಲಭ್ಯವಿದೆ. ಆದ್ದರಿಂದ ಯುವ ಉದ್ಯಮಿಗಳು ತಂತ್ರಜ್ಞಾನ ಅಳವಡಿಸಿಕೊಂಡು, ಮೇಡ್ ಇನ್ ಮೈಸೂರ್, ಮೇಡ್ ಇನ್ ಕರ್ನಾಟಕ ಎಂಬ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ತಲುಪುವ ಸಂಕಲ್ಪ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಟಿಪಿಸಿ ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಎಲ್.ಮೇಘಲಾ, ಗಣ್ಯರಾದ ಅರವಿಂದ್ ಭಟ್, ಉಮಾ, ರಫ್ತು ನಿರ್ವಹಣಾ ತರಬೇತಿ ಅಭ್ಯರ್ಥಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net