ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆ ಪದಾಧಿಕಾರಿಗಳು ಕೇವಲ ಹಿಂದುತ್ವವಾದಿಗಳಷ್ಟೇ ಎಂದು ಸ್ಪಷ್ಟನೆ
  • ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ, ಅವರು ಕೇವಲ ಹಿಂದುತ್ವವಾದಿಗಳಷ್ಟೇ.
  • ಅದರ ಎಲ್ಲ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದ್ದು, ಹೀಗಾಗಿ ಅದು ನೋಂದಣಿ ಆಗಬೇಕು
ಮೈಸೂರು: ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆ ಮಾತ್ರವಲ್ಲ. ಅದು, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ದೇಶದ ಎಲ್ಲ ಕಡೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿದೆ. ಜತೆಗೆ, ಹಣವೂ ಬರುತ್ತಿದೆ. ಇದಕ್ಕೆಲ್ಲ ಸಂಸ್ಥೆ ಲೆಕ್ಕ ಕೊಡಬೇಕು ತಾನೇ? ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.
ಆರ್‌ಎಸ್‌ಎಸ್ ನೋಂದಣಿ ವಿಚಾರದ ಕುರಿತು ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ, ಅವರು ಕೇವಲ ಹಿಂದುತ್ವವಾದಿಗಳಷ್ಟೇ. ಧರ್ಮದ ಹೆಸರಿನಲ್ಲಿ ಏನೂ ಬೇಕಾದರೂ ಮಾಡುತ್ತೇವೆ ಎನ್ನುವುದು ರಾಜ್ಯದಲ್ಲಿ ನಡೆಯಲ್ಲ. ಅದರ ಎಲ್ಲ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದ್ದು, ಹೀಗಾಗಿ ಅದು ನೋಂದಣಿ ಆಗಬೇಕು ಎಂದು ಆಗ್ರಹಿಸಿದರು.
ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ. ಗೃಹ ಸಚಿವರು ಆರ್‌ಎಸ್‌ಎಸ್ ನೋಂದಣಿಗೆ ಒತ್ತಾಯ ಮಾಡಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡರು.

ಬಿಡದಿ ಟೌನ್‌ಶಿಪ್ ಹೆಸರಲ್ಲಿ ಜೆಡಿಎಸ್ ರಾಜಕಾರಣ 

ಬಿಡದಿ ಟೌನ್‌ಶಿಪ್ ವಿಚಾರವಾಗಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು. 
ಶೇ.80 ಯೋಜನೆ ಪರವಾಗಿ ಒಲವು ತೋರಿ ಭೂಮಿ ಕೊಡಲು ಒಪ್ಪಿದ್ದು, ಕೆಲ ರೈತರಷ್ಟೇ ಭೂಮಿ ನೀಡಲು ವಿರೋಧ ಮಾಡುತ್ತಿದ್ದಾರೆ. ಸೌಹಾರ್ದವಾಗಿ ರೈತರ ಮನವೊಲಿಸಲು ಸರ್ಕಾರ ಮುಂದಾಗಿದೆ. ರೈತರು ಪರಿಹಾರ ಪಡೆಯಲು ಸಹಿ ಮಾಡುತ್ತಿದ್ದಾರೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಕೆಲವರ ಮಾತು ಕೇಳಿಕೊಂಡು ಯೋಜನೆ ಕೈ ಬಿಡಲು ಆಗುವುದಿಲ್ಲ. ನಗರದ ಜನಸಂದಣಿ ಹೆಚ್ಚಾಗಿದೆ. ಎಷ್ಟೋ ಕುಟುಂಬದವರಿಗೆ ನಿವೇಶನದ ಅಗತ್ಯವಿದೆ. ಬೆಂಗಳೂರಿನ ಜನಸಂಖ್ಯೆಯೂ ಹಂಚಿಕೆಯಾಗಬೇಕಿದೆ. ಬೆಂಗಳೂರು ವಿಸ್ತೀರ್ಣದ ಅವಶ್ಯಕತೆಯೂ ಇದೆ. ರೈತರೊಂದಿಗೆ ಮಾತುಕತೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

5ನೇ ಅಭ್ಯರ್ಥಿ ಗೆಲುವು ನಿಶ್ಚಿತ

ಬಿಡದಿ ರೆಸಾರ್ಟ್‌ನಲ್ಲಿ ನಿಗದಿಯಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚುನಾವಣೆ ತಂತ್ರಗಾರಿಕೆ ರೂಪಿಸಲಾಗುತ್ತದೆ. ಈ ವಿಧಾನ ಪರಿಷತ್ ಚುನಾವಣೆಗೂ ತಯಾರಿ ಮಾಡಿಕೊಳ್ಳಲಾಗಿದೆ. ವರಿಷ್ಠರ ಸೂಚನೆಯಂತೆ ನಮ್ಮೆಲ್ಲ ಶಾಸಕರು ಮತ ಹಾಕುತ್ತಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಕೂಡ ಜಯ ಗಳಿಸಲಿದ್ದಾರೆ. ಈ ಸಾಧ್ಯತೆ ಇರುವ ಕಾರಣಕ್ಕಾಗಿಯೇ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದ್ದು, ಗೆಲ್ಲುವುದು ಖಚಿತ ಎಂದರು.
ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಅನರ್ಹರ ಕುರಿತು ಪರಿಶೀಲಿಸಿ ಪರಿಷ್ಕರಿಸಲಾಗುವುದು. ಪ್ರತಿಪಕ್ಷಗಳ ನಾಯಕರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net