ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಟಿ.ಎಸ್.ಹರೀಶ್ ಅಭಿಮತ
ಪಿರಿಯಾಪಟ್ಟಣದ ಅಬ್ಬೂರು ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರನ್ನು ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಟಿ.ಎಸ್.ಹರೀಶ್, ಜೆ.ಎಸ್.ನಾಗರಾಜ್, ಸಿ.ಎನ್.ವಿಜಯ್, ಎಂ.ಬಿ.ಸಂಪತ್, ಎಚ್.ಟಿ.ಪರಮೇಶ್, ಡಿ.ರಮೇಶ್, ನಾಗನಾಯ್ಕ, ಡಿ.ಆರ್.ಧನಂಜಯ್ ಇತರರು ಇದ್ದರು.
Published on:
Copied
Follow Us
ಪಿರಿಯಾಪಟ್ಟಣ: ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಗೌರವಯುತವಾದ ವೃತ್ತಿಯಾಗಿದ್ದು ಮಕ್ಕಳ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಹರೀಶ್ ತಿಳಿಸಿದರು.
ಪಟ್ಟಣದ ಅಬ್ಬೂರು ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಎಷ್ಟೇ ಉನ್ನತ ಸ್ಥಾನಕ್ಕೆ ತಲುಪಿದ್ದರೂ ನಮಗೆ ಶಿಕ್ಷಣ ಕಲಿಸಿದ ಗುರುಗಳನ್ನು ಪೂಜ್ಯ ಭಾವದಿಂದ ನೋಡುತ್ತೇವೆ. ಉತ್ತಮ ವಿದ್ಯಾವಂತರನ್ನು ಹೊಂದಿರುವ ರಾಷ್ಟ್ರಗಳು ಅಭಿವೃದ್ಧಿಯತ್ತ ಯಶಸ್ವಿಯಾಗಿ ಮುನ್ನಡೆಯಲಿವೆ ಎಂದ ಅವರು, ಭಾರತವೂ ಈ ನಿಟ್ಟಿನಲ್ಲಿ ಯಶಸ್ವಿಯಾದ ಹೆಜ್ಜೆಯನ್ನು ಇಡುತ್ತಿದೆ ಎಂದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವಕೀಲ ಜೆ.ಎಸ್.ನಾಗರಾಜ್ ಮಾತನಾಡಿ, ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅಭೂತಪೂರ್ವವಾದ ಕೊಡುಗೆ ನೀಡಿರುವ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ನಾವೆಲ್ಲರೂ ಪ್ರತಿನಿತ್ಯವೂ ಪೂಜಿಸಬೇಕಿದೆ ಎಂದರು.
ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುವ ಹಂತಕ್ಕೆ ತಲುಪಿದ್ದ ಅಬ್ಬೂರು ಬಡಾವಣೆಯ ಈ ಸರ್ಕಾರಿ ಶಾಲೆಯನ್ನು ಶಿಕ್ಷಕಿ ಮಂಜುಳಾ ಅವರು ತಮ್ಮ ವಿಶೇಷ ಆಸಕ್ತಿ ಮತ್ತು ಪರಿಶ್ರಮದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಂತೆ ಮಾಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು. ಈ ಬಗ್ಗೆ ವಿಜಯವಾಣಿ ದಿನಪತ್ರಿಕೆಯು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ರೋಟರಿ ಸಹಾಯಕ ಪ್ರಾಂತಪಾಲ ಸಿ.ಎನ್.ವಿಜಯ್, ರೋಟರಿ ಐಕಾನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಬಿ.ಸಂಪತ್ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ, ಮಣಿ ಮತ್ತು ಸ್ವಾತಿ ಅವರನ್ನು ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ರೋಟರಿ ಸಂಸ್ಥೆಯ ಸದಸ್ಯರಾದ ಎಚ್.ಟಿ.ಪರಮೇಶ್, ಡಿ.ರಮೇಶ್, ನಾಗನಾಯ್ಕ, ಡಿ.ಆರ್.ಧನಂಜಯ್ ಮತ್ತಿತರರು ಇದ್ದರು.