ಡಿ.ದೇವರಾಜ ಅರಸು ಅವರಿಂದ ಕ್ರಾಂತಿಕಾರಿ ಬದಲಾವಣೆ:ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎಚ್.ಮೂರ್ತಿ
ಡಿ.ದೇವರಾಜ ಅರಸು ಅಧ್ಯಯನ ಪೀಠದ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಟಿ.ಎಚ್.ಮೂರ್ತಿ, ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರೊ.ಎಚ್.ಎಂ.ಚಂದ್ರಶೇಖರ್, ಡಾ.ಎಂ.ಬಿ. ಲಿಂಗರಾಜು, ಪ್ರೊ.ಎಂ. ಮೀರಾ ಇತರರು ಇದ್ದರು.
ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ
ಅತಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯವಾಗಿ ಶಕ್ತಿ ನೀಡುವ ಕೆಲಸವನ್ನು ಅವರು ಮಾಡಿದ್ದರು
ಮೈಸೂರು: ತಮ್ಮ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಡಿ.ದೇವರಾಜ ಅರಸು ಶ್ರಮಿಸಿದ್ದರು ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಗ್ರಾಮೀಣಾಭಿವೃದ್ಧಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎಚ್.ಮೂರ್ತಿ ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯದ ಮಾನಸಗಂಗೋತ್ರಿಯಲ್ಲಿರುವ ಡಿ.ದೇವರಾಜ ಅರಸು ಅಧ್ಯಯನ ಪೀಠದ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅತಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯವಾಗಿ ಶಕ್ತಿ ನೀಡುವ ಕೆಲಸವನ್ನು ಅವರು ಮಾಡಿದ್ದರು ಎಂದರು.
ಎಲ್ಲ ಜಾತಿಯ ಬಡವರ ಶ್ರೇಯೋಭಿವೃದ್ಧಿಗಾಗಿ 20 ಅಂಶಗಳ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದರು. ಇಂದಿನ ಪೀಳಿಗೆ ದೇವರಾಜ ಅರಸು ಅವರ ಜೀವನ-ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅರಸು ಅವರ ಜೀವನಾದರ್ಶ ನಾವೆಲ್ಲರೂ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅವರಿಗೆ ರಾಜಕೀಯ ಜೀವನ ತುಂಬ ಕ್ಲಿಷ್ಟಕರವಾಗಿತ್ತು. ಆದರೆ ಅವರು ಅದನ್ನು ಮೆಟ್ಟಿ ನಿಂತು ಮುಖ್ಯಮಂತ್ರಿಯಾದರು. ಅವರ ಸೇವೆಯನ್ನು ಮರೆಯಲಾಗದು ಎಂದು ಅಭಿಪ್ರಾಯಪಟ್ಟರು.
ಡಿ.ದೇವರಾಜ ಅರಸು ಅಧ್ಯಯನ ಪೀಠದ ಅಭಿವೃದ್ಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಎಂ.ಚಂದ್ರಶೇಖರ್ ಮಾತನಾಡಿ, ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಅರಸು ಅವರಲ್ಲಿರುವ ವಿಶೇಷ ವ್ಯಕ್ತಿತ್ವವಾಗಿತ್ತು. ಕೆಲವರಿಗೆ ಒಳ್ಳೆಯ ಸಾಮಾಜಿಕ ಚಿಂತನೆ ಇತ್ತು. ಆದರೆ ಅದನ್ನು ಕಾರ್ಯಗತಗೊಳಿಸಲು ಆಗಲಿಲ್ಲ. ಆದರೆ ಅರಸು ಅವರಿಗೆ ಒಳ್ಳೆಯ ಚಿಂತನೆ ಹಾಗೂ ಆ ಚಿಂತನೆಯನ್ನು ಅನುಷ್ಠಾನಕ್ಕೆ ತರುವ ಶಕ್ತಿಯೂ ಇತ್ತು. ಹೀಗಾಗಿ ಅವರು ಮಾಡಿರುವ ಕೆಲಸ ಬಹಳಷ್ಟು ಪ್ರಭಾವ ಬೀರಿವೆ ಎಂದರು.
ಡಿ. ದೇವರಾಜ ಅರಸು ಅಧ್ಯಯನ ಪೀಠ ಅಭಿವೃದ್ಧಿ ಅಧ್ಯಯನ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಎಂ.ಬಿ.ಲಿಂಗರಾಜು, ಪ್ರೊ.ಎಂ. ಮೀರಾ ಇತರರು ಇದ್ದರು.