ಅಮ್ಯೂಸ್‌ಮೆಂಟ್ ಪಾರ್ಕ್ ಅನುಮತಿ ರದ್ದುಗೊಳಿಸಿ

ಹುಣಸೂರು ನಗರಸಭೆ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸುವ ಕುಟುಂಬದವರು ಮೈದಾನದಲ್ಲೇ ಬಟ್ಟೆ ಒಗೆಯುವ ಮೂಲಕ ಅನೈರ್ಮಲ್ಯಕ್ಕೆ ಕಾರಣರಾಗಿದ್ದಾರೆ.
ಹುಣಸೂರು ನಗರಸಭೆ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸುವ ಕುಟುಂಬದವರು ಮೈದಾನದಲ್ಲೇ ಬಟ್ಟೆ ಒಗೆಯುವ ಮೂಲಕ ಅನೈರ್ಮಲ್ಯಕ್ಕೆ ಕಾರಣರಾಗಿದ್ದಾರೆ.
Published on
ಹುಣಸೂರು: ಇಲ್ಲಿನ ನಗರಸಭಾ ಮೈದಾನದಲ್ಲಿ ಖಾಸಗಿ ಸಂಸ್ಥೆಗೆ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಿ ಸಂಸ್ಥೆಯ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಒತ್ತಾಯಿಸಲಾಗಿದೆ.
ನಗರಸಭೆ ಮೈದಾನದಲ್ಲಿ ಜಾಯಿಂಟ್ ವ್ಹೀಲ್, ಟೈಟಾನಿಕ್, ಟೊರಟೊರ ಸೇರಿದಂತೆ ವಿವಿಧ ಮಾರಾಟ ಮಳಿಗೆಗಳನ್ನು ನಡೆಸಲು ನಗರಸಭೆ ಅನುಮತಿ ನೀಡಿದೆ. ಆದರೆ ಸದರಿ ಸಂಸ್ಥೆಯ ಮೇಲ್ವಿಚಾರಕರು ಸಾರ್ವಜನಿಕರಿಂದ 50 ರೂ. ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದೆ. ಈ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಯು ಕಳೆದ ಮಾ.31ರಂದು ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಪ್ರವೇಶ ಶುಲ್ಕ ವಸೂಲಿ ಮಾಡದಂತೆ ತಾಕೀತು ಮಾಡಿ, ಸಂಸ್ಥೆಯ ಮೇಲ್ವಿಚಾರಕರಿಂದ ಮುಚ್ಚಳಿಕೆ ಬರೆಸಿಕೊಂಡಿದೆ. ಇದೀಗ ಮತ್ತೆ ಪ್ರವೇಶ ಶುಲ್ಕ ವಸೂಲು ದಂಧೆ ಮುಂದುವರಿದಿದೆ.
ನಗರಸಭೆ ಮೈದಾನವು ರಾಷ್ಟ್ರೀಯ ಹಬ್ಬಗಳ ಆಚರಣೆ, ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಸೀಮಿತವಾಗಿದೆ. ಮೈದಾನದ ಸುತ್ತ ವಾಕಿಂಗ್ ಪಾತ್ ನಿರ್ಮಾಣವಾಗಿದೆ. ಇಂತಹ ಮೈದಾನದ ಪರಿಸರ ಸಂಪೂರ್ಣ ಹಾಳಾಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ದಿಂದ ಮೈದಾನವನ್ನು ಬಯಲು ಶೌಚ ಮಾಡಿಕೊಂಡಿದ್ದಾರೆ. ಬಟ್ಟೆ ಒಗೆಯುವ ತಾಣವನ್ನಾಗಿಸಿಕೊಂಡಿದ್ದಾರೆ. ಹಾಗಾಗಿ ಕೂಡಲೇ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಲು ನೀಡಿದ್ದ ಅನುಮತಿ ರದ್ದುಗೊಳಿಸಿ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮತ್ತು ಉಪಾಧ್ಯಕ್ಷ ಇಂಟೆಕ್ ರಾಜು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net