ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾಜಿ ಸಚಿವ ಶಾಸಕ ಕೆ.ವೆಂಕಟೇಶ್ ಮಾತನಾಡಿದರು.
Published on:
Copied
Follow Us
ಪಿರಿಯಾಪಟ್ಟಣ: 9 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಪ್ರಸಿದ್ಧ ಮಸಣಿಕಮ್ಮ ದೇವಾಲಯ ಮರುನಿರ್ಮಾಣ ಕಾಮಗಾರಿಯನ್ನು ಆಷಾಢ ಮಾಸದ ನಂತರ ಆರಂಭಿಸಲಾಗುವುದು ಎಂದು ಮಾಜಿ ಸಚಿವ, ಶಾಸಕ ಕೆ.ವೆಂಕಟೇಶ್ ಹೇಳಿದರು.
ಪಟ್ಟಣದ ಮಸಣೀಕಮ್ಮ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ದೇವಾಲಯ ಮರು ನಿರ್ಮಾಣಕ್ಕೆ 13 ಕೋಟಿ ರೂ. ಅಂದಾಜಿಪಟ್ಟಿ ತಯಾರಿಸಲಾಗಿತ್ತು ಆದರೆ ಅನುಷ್ಠಾನಕ್ಕೆ ಬರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ 9 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಬಾಬು ಎಂಬ ಗುತ್ತಿಗೆದಾರರೊಂದಿಗೆ ಈ ಸಭೆ ನಡೆಸುತ್ತಿದ್ದೇನೆ. ಗುತ್ತಿಗೆದಾರರು ಒಪ್ಪಿದರೆ ಆಷಾಢ ತಿಂಗಳಿಗೂ ಮೊದಲೆ ಕಾಮಗಾರಿ ಆರಂಭಿಸಬಹುದು. ನನ್ನದೇನು ಅಭ್ಯಂತರವಿಲ್ಲ ಎಂದರು.
ಒತ್ತುವರಿ ತೆರವು: ದೇವಾಲಯದ ಸುತ್ತ ಒಟ್ಟು 7 ಗುಂಟೆ ಜಾಗವಿದ್ದು, ಇದನ್ನು ಒತ್ತುವರಿ ಮಾಡಿಕೊಂಡು ಮನೆ ಅಂಗಡಿಗಳ ನಿರ್ಮಾಣ ಮಾಡಿಕೊಳ್ಳಲಾಗಿದೆ. ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಲಾಗುವುದು. ಇದಕ್ಕಾಗಿ ನನ್ನ ಬಳಿ ಯಾರೂ ಶಿಫಾರಸ್ಸು ಮಾಡಿಕೊಂಡು ಬರಬಾರದು ಎಂದು ಶಾಸಕರು ಹೇಳಿದರು.
ಗುತ್ತಿಗೆದಾರ ಬಾಬು ಮಾತನಾಡಿ, ದೇವಾಲಯದ ಮೂಲಮೂರ್ತಿಗೆ ಯಾವುದೇ ತೊಂದರೆಯಾಗದಂತೆ ಉಳಿಸಿಕೊಂಡು ಮರುನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಆಗಮಿಕ ಪಂಡಿತರನ್ನು ಕರೆಯಿಸಿ ಅವರಿಂದ ಪೂಜೆ ನೆರವೇರಿಸಿ ನಂತರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಆಷಾಢ ಕಳೆದ ನಂತರ ಕಾಮಗಾರಿ ಆರಂಭಿಸಲಾಗುವುದು. ಈ ವಿಳಂಬವನ್ನು ನಿರ್ಮಾಣ ಹಂತದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು. ದೇವಾಲಯ ಸುಂದರವಾಗಿ ಮರುನಿರ್ಮಾಣವಾಗಲಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ದೇವಾಲಯ ನಿರ್ಮಾಣವಾಗುವವರೆಗೆ ಮೂಲಮೂರ್ತಿಯನ್ನು ಅಲ್ಲೆಬಿಟ್ಟು ದೇವರ ಉತ್ಸವ ಮೂರ್ತಿಯನ್ನು ಬೇರೆಡೆ ಸ್ಥಾಪನೆ ಮಾಡಿ, ಅಲ್ಲಿ ದೇವಿಗೆ ಎಂದಿನಂತೆ ಪೂಜೆ ಅರ್ಚನೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ನಿಸರ್ಗ ಪ್ರಿಯ ತಿಳಿಸಿದರು.
ಪಿರಿಯಾಪಟ್ಟಣದ ಮಸಣೀಕಮ್ಮ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾರುಪತ್ತೆದಾರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಇವರನ್ನು ತಕ್ಷಣದಿಂದ ಕೆಲಸದಿಂದ ತೆಗೆದುಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಈ ಬಗ್ಗೆ ಶಾಸಕರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಅವರ ಆದೇಶದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಸಾರ್ವಜನಿಕರು ತಕ್ಷಣ ಕ್ರಮ ವಹಿಸುವಂತೆ ಒತ್ತಡ ಹಾಕಿದರು. ಬಳಿಕ ಕಡ್ಡಾಯ ರಜೆಯ ಮೇಲೆ ಕಳುಹಿಸುವುದಾಗಿ ತಹಸೀಲ್ದಾರ್ ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಕಾಂಗ್ರೆಸ್ ಖಜಾಂಚಿ ಬಿ.ಜೆ.ಬಸವರಾಜು, ಲೋಕೋಪಯೋಗಿ ಎಇಇ ಯೋಗಾನಂದ್, ಆರ್‌ಐ ಪಾಂಡು, ಪುರಸಭೆ ಮಾಜಿ ಸದಸ್ಯರಾದ ಎಚ್.ಕೆ.ಮಂಜುನಾಥ್, ರವಿ, ರಾಜೇಶ್, ಗ್ರಾಮದ ಮುಖಂಡರಾದ ಮಂಜು, ಸೋಮು ಇತರರು ಇದ್ದರು.