ಕಂದಾಯ ಬೀಳು ಕೂಡಲೇ ಪರಿಹರಿಸಿ

ಎಚ್.ಡಿ.ಕೋಟೆ ತಾಲೂಕಿನ ಹತ್ವಾಳ್ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಉದ್ಘಾಟಿಸಿದರು. ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಇತರರಿದ್ದರು.
ಎಚ್.ಡಿ.ಕೋಟೆ ತಾಲೂಕಿನ ಹತ್ವಾಳ್ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಉದ್ಘಾಟಿಸಿದರು. ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಅಧ್ಯಕ್ಷ ಬಡಲಗಪುರ ನಾಗೇಂದ್ರ ಒತ್ತಾಯ
ಎಚ್.ಡಿ.ಕೋಟೆ : ಹತ್ವಾಳು ಗ್ರಾಮದ ಸರ್ವೇ ನಂಬರ್‌ಗಳಲ್ಲಿ ಇರುವ ಕಂದಾಯ ಬೀಳನ್ನು ಕೂಡಲೇ ಪರಿಹರಿಸಿ ಪಹಣಿಯಲ್ಲಿ ರೈತರ ಹೆಸರನ್ನು ನಮೂದಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಲಗಪುರ ನಾಗೇಂದ್ರ ಒತ್ತಾಯಿಸಿದರು.
ತಾಲೂಕಿನ ಚಾಮಹಳ್ಳಿ ಗ್ರಾಮದಲ್ಲಿ ಬುಧವಾರ ರೈತ ಸಂಘದ ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಹತ್ವಾಳು ಗ್ರಾಮದ ಸರ್ವೇ ನಂಬರ್‌ಗಳಲ್ಲಿ 400ಕ್ಕೂ ಹೆಚ್ಚು ಎಕರೆ ಭೂಮಿ ಬೀಳು ಎಂದು ಫಸಲು ಪಹಣಿಯಲ್ಲಿ ನಮೂದಾಗುತ್ತಾ ಬಂದಿದೆ. ರೈತರು ಸ್ವಾಧೀನ ಹೊಂದಿರುವ ಈ ಭೂಮಿಯ ಬೀಳನ್ನು ತೆರವು ಮಾಡಬೇಕೆಂದು ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾಗಿಯೂ ತಾಲೂಕು ಆಡಳಿತ ಈ ಬಗ್ಗೆ ಇದೂವರೆಗೆ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟವನ್ನು ತೀವ್ರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಹತ್ವಾಳು ಕಟ್ಟೆಯಿಂದ ಹಂಪಾಪುರವರೆಗಿನ ರಸ್ತೆಯನ್ನು ಆಧುನೀಕರಿಸಬೇಕು, ಹಂಪಾಪುರ ಹೋಬಳಿಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿದರು. ಗ್ರಾಮದ ಸ್ಮಶಾನ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಬಗರ್‌ಹುಕುಂ ಸಾಗುವಳಿಗಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಸಾಗುವಳಿ ಕೊಡಿಸುವುದಾಗಿ ಕೆಲವರು ಹಸಿರು ಟವಲ್ ಹಾಕಿಕೊಂಡು ರೈತರನ್ನು ಸುಲಿಗೆ ಮಾಡುತ್ತಿದ್ದು, ಅಂತಹವರನ್ನು ಸಂಘದಿಂದ ಹೊರ ಹಾಕಿದ್ದೇವೆ. ಯಾರೇ ಹಸಿರು ಟವಲ್ ಹಾಕಿಕೊಂಡು ರೈತರಿಂದ ಲಂಚ ಬೇಡಿಕೆ ಇಟ್ಟರೆ ಸಂಘದ ಗಮನಕ್ಕೆ ತರಬೇಕೆಂದು ಕರೆ ನೀಡಿದರು.
ಮಹಿಳಾ ಘಟಕದ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ತಾಲೂಕು ಅಧ್ಯಕ್ಷ ಪಿ.ಪಳಿನಿ ಸ್ವಾಮಿ, ಪ್ರಧಾನ ಕಾರ್ಯದರ್ಶಿ ವಡ್ಡರಗುಡಿ ಬಸವರಾಜ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ರಾಜೇಗೌಡ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೋಗಳ್ಳಿ ಪುಟ್ಟಣ್ಣಯ್ಯ, ತಾಲೂಕು ಕಾರ್ಯದರ್ಶಿ ಚಾಮಳ್ಳಿ ಮಹದೇವು, ಮುಖಂಡರಾದ ಕ್ಯಾತನಹಳ್ಳಿ ಗೋವಿಂದೆಗೌಡ, ಹಿರೇಹಳ್ಳಿ ಶಿವಲಿಂಗಪ್ಪ, ಚಕ್ಕೋಡನಹಳ್ಳಿ ಶಿವೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net