ಮೀಸಲಾತಿ ಕಡಿತ : ಹೋರಾಟಕ್ಕೆ ನಾಯಕರ ಸಂಘ ನಿರ್ಧಾರ

ಮೀಸಲಾತಿ ವಿಚಾರವಾಗಿ ಮೈಸೂರು ನಗರದಲ್ಲಿ ಬುಧವಾರ ಜಿಲ್ಲಾ ನಾಯಕರ ಸಂಘದ ಸಭೆ ನಡೆಯಿತು.
ಮೀಸಲಾತಿ ವಿಚಾರವಾಗಿ ಮೈಸೂರು ನಗರದಲ್ಲಿ ಬುಧವಾರ ಜಿಲ್ಲಾ ನಾಯಕರ ಸಂಘದ ಸಭೆ ನಡೆಯಿತು.
Published on
ಮೈಸೂರು: ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಪ್ರಮಾಣ ಇಳಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಶೇ.7ರಷ್ಟು ಮೀಸಲಾತಿ ಪ್ರಮಾಣವನ್ನು ಷೆಡ್ಯೂಲ್ 9ಕ್ಕೆ ಸೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲು ಜಿಲ್ಲಾ ನಾಯಕರ ಸಂಘ ನಿರ್ಧರಿಸಿದೆ.
ನಗರದಲ್ಲಿ ನಡೆದ ಸಂಘದ ಪದಾಧಿಕಾರಿಗಳು, ಪ್ರಮುಖರ ಸಭೆಯಲ್ಲಿ ಈ ಕುರಿತ ಚರ್ಚೆ ನಡೆಯಿತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಹಿಂದಿನ ಸರ್ಕಾರ ಪರಿಶಿಷ್ಟ ಜಾತಿಗೆ ಶೇ.17ರಷ್ಟು, ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ಜಾರಿಗೊಳಿಸಿತ್ತು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶೇ.3ಕ್ಕೆ ಕಡಿತಗೊಳಿಸಿ ನೇಮಕಾತಿ ಮಾಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿರುವುದನ್ನು ಸಭೆ ಖಂಡಿಸಿತು.
ಪರಿಶಿಷ್ಟ ಪಂಗಡಕ್ಕೆ ಶೇ.7ರಂತೆ ಮೀಸಲಾತಿ ನಿಗದಿಪಡಿಸಿ ಉದ್ಯೋಗ ನೇಮಕಾತಿಯಲ್ಲಿ ಅವಕಾಶ ಮಾಡಿಕೊಡಬೇಕು. ಶೇ.7ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರವು ಷೆಡ್ಯೂಲ್ 9ಕ್ಕೆ ಸೇರಿಸಲು ಒತ್ತಾಯಿಸಬೇಕು. ಮೊದಲು ಜಿಲ್ಲಾ ಮಟ್ಟದಲ್ಲಿ ಶಾಂತಿಯುತವಾಗಿ ಪ್ರತಿಭಟನೆ, ನಂತರ ತಾಲೂಕು ಮಟ್ಟದಲ್ಲಿ ಪ್ರತಿಭಟನೆ, ಬಳಿಕ ಜಿಲ್ಲೆಯ ಶಾಸಕರು, ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪು.ಶ್ರೀನಿವಾಸ್ ನಾಯಕ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಜಿಲ್ಲಾ ಉಪಾಧ್ಯಕ್ಷ ಹಿನಕಲ್ ಕೆಂಪನಾಯಕ, ಹುಣಸೂರು ಕೆ.ಎಸ್.ಅಣ್ಣಯ್ಯ ನಾಯಕ, ಉದ್ಬೂರು ಮಹದೇವಸ್ವಾಮಿ, ರಾಚಪ್ಪ, ಕಡಕೊಳ ಕುಮಾರಸ್ವಾಮಿ, ತಲಕಾಡು ಮಂಜುನಾಥ್, ಲೋಕೇಶ್, ಪ್ರಭಾಕರ್ ಹುಣಸೂರು ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net