ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಸಂಶೋಧಕರ ಬಳಗದ ಪ್ರತಿಭಟನೆ
ಮೈಸೂರು ವಿವಿ ವ್ಯಾಪ್ತಿಯ ಸಂಶೋಧಕರಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ಶಿಷ್ಯವೇತನ ರಹಿತ ಸಂಶೋಧಕರ ಬಳಗದಿಂದ ನಗರದ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್, ಚೋರನಹಳ್ಳಿ ಶಿವಣ್ಣ, ದೀಪ, ಮೌನ ದೊರೆ, ಧೀರಜ್, ನವೀನ್, ವಿಶಾಖ್ ಬಿ.ಎನ್, ಸಣ್ಣಮಾದು ಇತರರು ಇದ್ದರು.
ಎಸ್‌ಸಿ, ಎಸ್‌ಟಿ ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ
ಕೂಡಲೇ ಪ್ರಸ್ತುತ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಸಂಶೋಧಕರಿಗೂ ತಾರತಮ್ಯವಿಲ್ಲದೆ ಮಂಜೂರು ಮಾಡಬೇಕು
ಮೈಸೂರು: ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸಂಶೋಧಕರಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ಶಿಷ್ಯವೇತನ ರಹಿತ ಸಂಶೋಧಕರ ಬಳಗದಿಂದ ನಗರದ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವಿವಿ ವ್ಯಾಪ್ತಿಯ ಕಾಲೇಜುಗಳು, ಮಾನಸಗಂಗೋತ್ರಿಯಲ್ಲಿ ಪಿಎಚ್.ಡಿ ಪ್ರವೇಶಾತಿ ಪಡೆದು ಸಂಶೋಧನೆ ಕೈಗೊಂಡಿರುವ ಸಂಶೋಧಕರು 2026-2027ನೇ ಸಾಲಿನಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕೆ 96 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಮೈಸೂರು ವಿಶ್ವವಿದ್ಯಾಲಯ ಕೇವಲ 20 ಸಂಶೋಧಕರಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡಿದೆ ಎಂದು ದೂರಿದರು.
ಇದು ವಿದ್ಯಾರ್ಥಿ ವಿರೋಧಿಯಾಗಿದ್ದು,ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಶಿಷ್ಯವೇತನ ರಹಿತವಾಗಿ ಪಿಎಚ್.ಡಿ ಪದವಿ ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಕಿಡಿ ಕಾರಿದರು.
ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ವರ್ಷಕ್ಕೆ 23 ಕೋಟಿ ರೂ. ಅನಾವಶ್ಯಕವಾಗಿ ನೀಡುತ್ತಿದ್ದು, ಇದು ವಿಶ್ವವಿದ್ಯಾಲಯದ ಹಣ ಪೋಲಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಅಲ್ಲದೆ ಈ ವರ್ಷದ ವಿಶ್ವವಿದ್ಯಾಲಯದ ಬಜೆಟ್‌ನ ಒಟ್ಟು 400 ಕೋಟಿ ರೂ.ಗಳಲ್ಲಿ ನಿಯಮಾನುಸಾರ ಶೇ.24ರಷ್ಟನ್ನು ಎಸ್‌ಸಿ, ಎಸ್‌ಟಿ ಉಪ ಯೋಜನೆಗಳಿಗೆ ಮೀಸಲಿಟ್ಟರೆ 96-97 ಕೋಟಿ ರೂ. ನೀಡಬೇಕಾಗುತ್ತದೆ ಎಂದು ಹೇಳಿದರು.
ಆದರೆ ವಿಶ್ವವಿದ್ಯಾಲಯ ಎಸ್‌ಸಿ, ಎಸ್‌ಟಿ ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ. ಆನ್‌ಲೈನ್ ಪ್ರೋಗ್ರಾಮ್‌ನಲ್ಲಿ 138 ಕೋಟಿ ರೂ. ಲಾಭ ತೋರಿಸಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಿಗೆ ಸಂಶೋಧನಾ ಶಿಷ್ಯವೇತನ ನೀಡಲು ತೀವ್ರ ಆರ್ಥಿಕ ಸಂಕಷ್ಟವಿರುವಂತೆ ನಟಿಸುತ್ತಾ ತನ್ನ ಎಸ್‌ಸಿ, ಎಸ್‌ಟಿ ವಿರೋಧಿ ನಡೆ ಪ್ರದರ್ಶಿಸುತ್ತಿದೆ ಎಂದು ದೂರಿದರು.
ಕೂಡಲೇ ಪ್ರಸ್ತುತ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಸಂಶೋಧಕರಿಗೂ ತಾರತಮ್ಯವಿಲ್ಲದೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಬಳಗದ ಸಂಚಾಲಕರಾದ ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್, ದೀಪ, ಮೌನ ದೊರೆ, ಧೀರಜ್, ನವೀನ್, ವಿಶಾಖ್ ಬಿ.ಎನ್, ಸಣ್ಣಮಾದು, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಸಾಮಾಜಿಕ ಹೋರಾಟಗಾರ ಅರವಿಂದ ಇತರರು ಇದ್ದರು.