ಕನ್ನಡ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶಕ್ಕಾಗಿ ಆಗ್ರಹ
ಕನ್ನಡ ಭಾಷಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮೈವಿವಿ ಸಂಶೋಧಕರ ಸಂಘದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಸಲ್ಲಿಸಲಾಯಿತು. ವರಹಳ್ಳಿ ಆನಂದ, ಸದಸ್ಯರಾದ ರಾಮರೆಡ್ಡಪ್ಪ, ಮನು ಪ್ರಸಾದ್ ಇದ್ದರು.
ಪ್ರಾಧಿಕಾರದ ಅಧ್ಯಕ್ಷರಿಗೆ ಮೈಸೂರು ವಿವಿ ಸಂಶೋಧಕರ ಸಂಘದಿಂದ ಮನವಿ
ಮೈಸೂರು: ಕನ್ನಡ ಭಾಷಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ನಗರದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.
6ರಿಂದ 8ನೇ ತರಗತಿಯ ಬೋಧನೆಗಾಗಿ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರಿಗೆ ಅವಕಾಶ ನೀಡದಿರುವುದು ಕನ್ನಡ ಭಾಷಾ ಅಭ್ಯರ್ಥಿಗಳಿಗೆ ವಂಚನೆ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಜೀವಶಾಸ್ತ್ರ ವಿಜ್ಞಾನ ವಿಷಯಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಆಂಗ್ಲಭಾಷೆ ಬೋಧನೆಗೆ ಪದವಿ ವ್ಯಾಸಂಗದಲ್ಲಿ ಐಚ್ಛಿಕ ವಿಷಯವಾಗಿ ಆಂಗ್ಲಭಾಷೆಯನ್ನು ಮಾಡಿದವರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ಮಾನದಂಡ ಮಾಡಲಾಗಿದೆ.
ಆದರೆ, ಇದೇ ರೀತಿ ಕನ್ನಡ ಬೋಧನೆಗೆ ಪದವಿ ವ್ಯಾಸಂಗದಲ್ಲಿ ಐಚ್ಛಿಕ ವಿಷಯವಾಗಿ ಕನ್ನಡ ಭಾಷೆಯನ್ನು ಓದಿದವರಿಗೆ ಕನ್ನಡ ಭಾಷಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಬೇಕಿತ್ತಲ್ಲವೇ? ಇಲ್ಲಿ ಕನ್ನಡ ವಿಷಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡಿಲ್ಲ.
ಇದು ಏಕೆ ಎಂಬುದಕ್ಕೆ ಸರ್ಕಾರ ನೇಮಕಾತಿ ಹೊರಡಿಸಿರುವ ಪ್ರಕಟಣೆಯಲ್ಲಿ ಯಾವ ಸಮರ್ಥನೆಯನ್ನೂ ನೀಡಿಲ್ಲ. ಇದು ಅಭ್ಯರ್ಥಿಗಳ ಆತಂಕಕ್ಕೆ ಕಾರಣ ಆಗಿದೆ. ಈ ಕೂಡಲೇ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಿ ಪರೀಕ್ಷೆ ನಡೆಸುವ ಮೂಲಕ ನೇಮಕಾತಿ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದೆ.
ಪ್ರಮುಖ ಬೇಡಿಕೆಗಳು:
ಜಿ.ಪಿ.ಎಸ್.ಟಿ.ಆರ್. ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆ ಸೇರಿಸಬೇಕು. ಶಿಕ್ಷಕರ ನೇಮಕಾತಿಯಲ್ಲಿ ವಸ್ತುನಿಷ್ಠ ಪರೀಕ್ಷೆಯ ಬದಲು ವಿವರಣಾತ್ಮಕ ಪರೀಕ್ಷೆ ನಡೆಸುವ ಪ್ರಸ್ತಾವ ಹಿಂಪಡೆದು, ಈ ಹಿಂದೆ ನಿಗದಿ ಪಡಿಸಿದ್ದ ವಸ್ತುನಿಷ್ಠ ಪರೀಕ್ಷಾ ಪದ್ಧತಿ ಮುಂದುವರಿಸಬೇಕು.
ಈಗಾಗಲೇ ನೇಮಕಾತಿ ವಿಳಂಬ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ಈ ಕಠಿಣತೆ ಬೇಡ, ಜಿ.ಪಿ.ಎಸ್.ಟಿ.ಆರ್., ಎಚ್.ಎಸ್.ಟಿ.ಆರ್. ಶಿಕ್ಷಕರ ನೇಮಕಾತಿಯಲ್ಲಿ ಪತ್ರಿಕೆ-3 ಅನ್ನು ಕೈಬಿಡಬೇಕು. ಈ ಪರೀಕ್ಷೆಯಿಂದ ಈ ಹೆಚ್ಚುವರಿ ಪತ್ರಿಕೆ ಮಾಡಲಾಗಿದೆ. ಪೂರ್ವಭಾವಿಯಾಗಿ ತಿಳಿಸದೇ ಅಳವಡಿಸಿರುವುದು ಸರಿಯಲ್ಲ.
ಗರಿಷ್ಠ ವಯೋಮಿತಿ ವಿಸ್ತರಣೆ ಮಾಡಬೇಕು. ಈ ಹುದ್ದೆಗೆ ನೇಮಕಾತಿ ನಡೆದು ಐದು ವರ್ಷಗಳಿಗಿಂತ ಹೆಚ್ಚು ಕಾಲ ಆಗಿರುವ ಕಾರಣ ಈ ಮನವಿಯನ್ನೂ ಪುರಸ್ಕರಿಸಬೇಕು ಎಂದು ಆಗ್ರಹಿಸಿದರು.
ಸಂಘದ ವರಹಳ್ಳಿ ಆನಂದ, ಸದಸ್ಯರಾದ ರಾಮರೆಡ್ಡಪ್ಪ, ಮನು ಪ್ರಸಾದ್ ಇನ್ನಿತರರಿದ್ದರು.