ಬರದ ಗಂಭೀರತೆ ಅರಿತು ‘ಕಾರ್ಯಪಡೆ’ ರಚಿಸಿಕೊಂಡು ಕಾರ್ಯನಿರ್ವಹಿಸಿ:ಡಾ. ಜಿ.ಪರಮೇಶ್ವರ ಸೂಚನೆ

ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ದಿನಗಳಲ್ಲಿ ಎದುರಾಗಬಹುದಾಗ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು.
  • ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿಗೆ ಏನು ವ್ಯವಸ್ಥೆ ಮಾಡಬೇಕು ಎನ್ನುವುದನ್ನು ಈಗಿನಿಂದಲೇ ಚಿಂತನೆ ನಡೆಸಬೇಕು
ಮೈಸೂರು:ತೀವ್ರವಾಗಿ ಕಾಡಲಿರುವ ಬರದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ‘ಕಾರ್ಯಪಡೆ’ (ಟಾಸ್ಕ್‌ಪೋರ್ಸ್) ರಚಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಸಚಿವರೂ ಅದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಬಳಿಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಎದುರಾಗಬಹುದಾಗ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು. ವಿಪತ್ತು ನಿರ್ವಹಣಾ ಸಮಿತಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಸ್ಥಳೀಯವಾಗಿಯೇ ಪರಿಹರಿಸಬಹುದಾದ ಕಾಮಗಾರಿಗಳನ್ನು ಬಿಟ್ಟು, ಸರ್ಕಾರದಿಂದ ಅಗಬೇಕಾದ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವರದಿಗಳ ಪ್ರಕಾರ 150 ವರ್ಷಗಳ ಬಳಿಕ ಇಡೀ ವಿಶ್ವದಲ್ಲಿಯೇ ಬರದ ಛಾಯೆ ಕಾಣಿಸಿಕೊಂಡಿದೆ. ಭಾರತದಲ್ಲಿ 1876ರ ಬಳಿಕ ತೀವ್ರ ಬರದ ಲಕ್ಷಣ ಕಾಣಿಸಿಕೊಂಡಿದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳು ಬರಕ್ಕೆ ತುತ್ತಾಗಿವೆ ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿಯೂ ಗ್ರಾಮೀಣ ಭಾಗದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಬರದ ಈ ಗಂಭೀರತೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ನಗರ ಭಾಗಕ್ಕೆ ಕಾವೇರಿ, ಕಬಿನಿಯಿಂದ ಕುಡಿಯುವ ನೀರು ಸರಬರಾಜು ಅದರೂ, ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿಗೆ ಏನು ವ್ಯವಸ್ಥೆ ಮಾಡಬೇಕು ಎನ್ನುವುದನ್ನು ಈಗಿನಿಂದಲೇ ಚಿಂತನೆ ನಡೆಸಬೇಕು ಎಂದರು.
ಕುಡಿಯುವ ನೀರಿಗಾಗಿ ಅಗತ್ಯ ಇದ್ದರೆ ಕೊನೆ ಹಂತವಾಗಿ ಹೊಸ ಬೋರ್‌ವೆಲ್ ಕೊರೆಸುವುದು, ಕೆಟ್ಟಿರುವ ಬೋರ್‌ವೆಲ್ ದುರಸ್ತಿ, ರೀ ಬೋರಿಂಗ್ ಮಾಡುವುದು ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಅವುಗಳಿಗೆ ನೀರು, ಮೇವು ಇರುವಂತೆ ನೋಡಿಕೊಳ್ಳಬೇಕು. ಮೇವಿನ ಕೊರತೆ ಉಂಟಾದರೆ ಮೇವು ಕಿಟ್ಟು ವಿತರಣೆ, ರೈತರಿಂದ ಮೇವು ಖರೀದಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಬೆಳೆ ವಿಮೆಗೆ ಕ್ರಮಕೈಗೊಳ್ಳಿ
ಜಿಲ್ಲೆಯಲ್ಲಿ 4.5 ಲಕ್ಷ ರೈತರಿದ್ದರೂ ಕೇವಲ 22,845 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ನೆರೆಯ ಹಾಸನದಲ್ಲಿ 4 ಲಕ್ಷ ರೈತರಿಗೆ 2 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಅಲ್ಲಿ ಅಗುವುದು ಇಲ್ಲಿ ಏಕೆ ಆಗುತ್ತಿಲ್ಲ? ಎಂದು ಡಾ. ಜಿ.ಪರಮೇಶ್ವರ ಅಧಿಕಾರಿಗಳನ್ನು ಪ್ರಶ್ನಿಸಿದರು.
ಬೆಳೆ ವಿಮೆ ಮಾಡಿಸಿದರೆ ಬೆಳೆ ಹಾಳಾದ ರೈತರಿಗೆ ಒಂದಷ್ಟು ಪರಿಹಾರವಾದರೂ ಸಿಗುತ್ತದೆ. ಆದ್ದರಿಂದ ರೈತರಿಗೆ ಅನುಕೂಲ ಮಾಡಿಕೊಡಲು ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ವಿಮೆ ಮಾಡಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿಕೊಡಬೇಕು. ರೈತರ ಮನವೊಲಿಸಿ ಹೆಚ್ಚು ರೈತರು ಬೆಳೆ ವಿಮೆ ಮಾಡಿಸುವಂತೆ ತಿಳಿ ಹೇಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಶೇ.56ರಷ್ಟು ಮಳೆ ಕೊರತೆ ಉಂಟಾಗಿದೆ. 3,76,609 ಹೆಕ್ಟೇರ್ ಪ್ರದೇಶ ಕೃಷಿ ಭೂಮಿಯಲ್ಲಿ ರೈತರಿಗೆ 2,12,751 ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.
ಶಾಸಕರಾದ ಜಿ.ಡಿ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಮೃಗಾಲಯ ಪ್ರಾಧಿಕಾರದ ರಂಗಸ್ವಾಮಿ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿ.ಪಂ. ಸಿಇಒ ಯುಕ್ತೇಶ್‌ಕುಮಾರ್, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಇತರರು ಇದ್ದರು.
ಪಿರಿಯಾಪಟ್ಟಣ ಕೈ ಬಿಟ್ಟಿದ್ದಕ್ಕೆ ಬೇಸರ
ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕನ್ನು ಬರ ಪಟ್ಟಿಯಿಂದ ಕೈ ಬಿಡಲಾಗಿದೆ. ಇದರಿಂದ ನಮ್ಮ ತಾಲೂಕಿನ ರೈತರಿಗೆ ತೊಂದರೆ ಅಗಲಿದೆ ಎಂದು ಶಾಸಕ ಕೆ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮಾನದಂಡದಂತೆ ಬರ ಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಸತತ ನಾಲ್ಕು ವಾರಗಳು ಮಳೆಬಾರದೆ ಇದ್ದಾಗ ಅಂತಹ ತಾಲೂಕನ್ನು ಬರದ ಪಟ್ಟಿಗೆ ಸೇರಿಸಲಾಗುವುದು. ಆದರೆ ಮೂರನೇ ವಾರದಲ್ಲಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ ಅಗಿರುವುದರಿಂದ ನಿಯಮದ ಪ್ರಕಾರ ಸೇರಿಸಿಲ್ಲ. ಅತಿ ಹೆಚ್ಚು ಬೆಳೆ ಹಾನಿಯಾಗಿರುವ ಕೂಡಗಿನ ತಾಲೂಕಿನಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಪಟ್ಟಿಗೆ ಸೇರಿಸಲಾಗಿಲ್ಲ. ಮುಂದಿನ ಪಟ್ಟಿಯಲ್ಲಿ ಸೇರಬಹುದು ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ಹಣ ಬಳಸಿಕೊಳ್ಳದ್ದಕ್ಕೆ ಗರಂ
ಮೈಸೂರು: ಗ್ರಾಮೀಣ ಭಾಗದ ಕುಡಿಯುವ ನೀರಿಗೆ ನೀಡಿದ್ದ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳದೆ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. ಮಾರ್ಚ್‌ನಲ್ಲಿ 5 ಕೋಟಿ, ಜುಲೈನಲ್ಲಿ 8 ಕೋಟಿ ರೂ. ನೀಡಲಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅಸಮಧಾನ ವ್ಯಕ್ತಪಡಿಸಿದರು.ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ,
ಹಣವಿಲ್ಲದೆ ಎಷ್ಟೋ ಕಾಮಗಾರಿಗಳು ನಡೆಯುವುದಿಲ್ಲ. ಆದರೆ ಇಲ್ಲಿ ಹಣ ನೀಡಿದ್ದರೂ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಟ್ಯಾಂಕರ್‌ಗಳ ಮೂಲಕ ಕೆಲವು ಕಡೆ ನೀರು ನೀಡುತ್ತಿದ್ದರೂ ಅನುದಾನ ಬಳಸಿಕೊಂಡಿಲ್ಲ ಎಂದು ಸಭೆಯಲ್ಲಿ ಕಿಡಿಕಾರಿದರು.
ಅನುದಾನ ನೀಡಿದ ಮಾರ್ಚ್ ಹಾಗೂ ಜುಲೈನ್ ಲೆಕ್ಕ ಕೊಡುವ ಬದಲು ಜನವರಿಯಿಂದ ಲೆಕ್ಕ ಕೊಡುತ್ತಿದ್ದೀರಿ. ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂದು ಡಾ.ಜಿ.ಪರಮೇಶ್ವರ ಆಕ್ಷೇಪಿಜಸಿದರೆ, ಸರಿಯಾದ ಲೆಕ್ಕ ನೀಡಲು ಏನಾಗಿದೆ ನಿಮಗೆ? ಎಂದು ಡಾ.ಯತೀಂದ್ರ ಕೋಪಗೊಂಡರು.
ನಗರಕ್ಕೆ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ
ಮೈಸೂರು ನಗರಕ್ಕೆ ಕುಡಿಯುವ ನೀರಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ. ಕೆಆರ್‌ಎಸ್ ಜಲಾಶಯದ ಮಟ್ಟ 60 ಅಡಿಗೆ ಕುಸಿದಾಗ ಸಮಸ್ಯೆಯಾಗಲಿದೆ ಎಂದು ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಸಭೆಗೆ ಮಾಹಿತಿ ನೀಡಿದರು.
ಈಗ ನಿತ್ಯ ನೀರು ಕೊಡಲಾಗುತ್ತಿದ್ದು, ಟ್ಯಾಂಕರ್‌ನಲ್ಲಿ ನೀರು ನೀಡುವ ಪರಿಸ್ಥಿತಿ ಇಲ್ಲ. ಆದರೆ 60 ಅಡಿಗಿಂತ ಕೆಳಗೆ ಹೋದಾಗ 18 ವಾರ್ಡ್‌ಗಳಲ್ಲಿ ಸಮಸ್ಯೆ ಕಾಡಲಿದೆ. ನಗರಪಾಲಿಕೆಯಲ್ಲಿ 8 ಟ್ಯಾಂಕರ್‌ಗಳಿದ್ದು, ಅಗತ್ಯ ಇದ್ದರೆ ಖಾಸಗಿಯವರಿಂದ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಅಲ್ಲದೆ ಜಲಾಶಯದ ಬಳಿ ಚೆಕ್ ಡ್ಯಾಂ ನಿರ್ಮಿಸಿ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ನಗರಕ್ಕೆ ಹೊಂದಿಕೊಂಡಂತೆ ಇರುವ ಹೂಟಗಳ್ಳಿ, ರಮ್ಮನಹಳ್ಳಿ, ಬೋಗಾದಿ ವ್ಯಾಪ್ತಿಯಲ್ಲಿರುವ ಬಡಾವಣೆಗಳಿಗೆ ನೀರಿನ ಸಮಸ್ಯೆ ಆಗದಂತೆ ನಗರಕ್ಕೆ ನೀರು ಸರಬರಾಜಿನಿಂದಲೇ ಅಲ್ಲಿಗೂ ನೀರು ನೀಡಲಾಗುತ್ತಿದೆ. ಹೂಟಗಳ್ಳಿಯಲ್ಲಿ ಮಾತ್ರ ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net